ಬೆಂಗಳೂರು: ‘ರಾಜ್ಯದಲ್ಲಿರುವ ಲೂಟಿಕೋರ ಬಿಜೆಪಿ ಸರ್ಕಾರದಲ್ಲಿ ಹಣ ದೋಚಲು ಆಡಳಿತ ಪಕ್ಷದವರ ನಡುವೆಯೇ ಕಿತ್ತಾಟ ನಡೆಯುತ್ತಿದೆ. ಜಿದ್ದಿಗೆ ಬಿದ್ದವರಂತೆ ಭ್ರಷ್ಟಾಚಾರದಲ್ಲೂ ಪೈಪೋಟಿಯಲ್ಲಿ ತೊಡಗಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನ್ಮದಿನದ ಅಂಗವಾಗಿ ಅರ್ಚಕರು, ಆಟೊ ಚಾಲಕರು, ಆಶಾ ಕಾರ್ಯಕರ್ತರಿಗೆ ಪಡಿತರ ಕಿಟ್ ವಿತರಿಸಲು ಯುವ ಕಾಂಗ್ರೆಸ್ ವತಿಯಿಂದ ಮಲ್ಲೇಶ್ವರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆಡಳಿತ ಪಕ್ಷದವರೇ ಸರ್ಕಾರದ ಭ್ರಷ್ಟಾಚಾರದ ಕುರಿತು ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಸರ್ಕಾರವನ್ನು ಹಿಂದೆ ನೋಡಿರಲಿಲ್ಲ. ಇದು ಕುಡುಕರ ಸರ್ಕಾರ. ಲಾಕ್‌ಡೌನ್‌ನಲ್ಲೂ ಮದ್ಯದಂಗಡಿಗಳನ್ನು ತೆರೆದು, ಜನರಿಗೆ ಕುಡಿತದ ಕೆಲಸವನ್ನು ಚೆನ್ನಾಗಿ ನಿಭಾಯಿಸಿದೆ. ಇಲ್ಲದಿದ್ದರೆ, ಸರ್ಕಾರಕ್ಕೆ ಆದಾಯ ಎಲ್ಲಿಂದ ಬರಬೇಕು’ ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಡವರಿಗೆ ತಲಾ 7 ಕೆ.ಜಿ ಅಕ್ಕಿ ವಿತರಿಸಲಾಗುತ್ತಿತ್ತು. ಈಗಿನ ಬಿಜೆಪಿ ಸರ್ಕಾರ ಅಕ್ಕಿಯ ಪ್ರಮಾಣವನ್ನು ತಲಾ 2 ಕೆ.ಜಿ.ಗೆ ಇಳಿಸಿದೆ. ನೆರೆಯ ಕೇರಳ ₹20 ಸಾವಿರ ಕೋಟಿ ಪರಿಹಾರ ಹಾಗೂ ತಮಿಳುನಾಡಿನಲ್ಲಿ ₹4 ಸಾವಿರ ಕೋಟಿ ಪರಿಹಾರ ಘೋಷಿಸಲಾಗಿದೆ. ರಾಜ್ಯದ ಎಲ್ಲ ಬಡವರ ಖಾತೆಗಳಿಗೆ ತಲಾ ₹10 ಸಾವಿರ ಹಣ ಜಮಾ ಮಾಡಿದರೆ, ಅಂದಾಜು ₹13 ಸಾವಿರ ಕೋಟಿ ವೆಚ್ಚವಾಗಲಿದೆ. ಜನ ಸಂಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸುವುದು ಸರ್ಕಾರದ ಜವಾಬ್ದಾರಿ’ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,’ರಾಜ್ಯ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಗಂಭೀರ ವಿಷಯಗಳ ಚರ್ಚೆಗೆ ರಾಜ್ಯ ಸರ್ಕಾರ ತುರ್ತಾಗಿ ವಿಧಾನಮಂಡಲ ಅಧಿವೇಶನ ಕರೆಯಬೇಕು’ ಎಂದು ಒತ್ತಾಯಿಸಿದರು.
‘ಬಿಜೆಪಿಯವರು ಸರ್ಕಾರದ ಪಡಿತರ ಕಿಟ್‌ಗಳಿಗೆ ತಮ್ಮ ಭಾವಚಿತ್ರ ಹಾಕಿ ಹಂಚುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನವರು ರಾಜ್ಯಕ್ಕೆ ಗೌರವ ತರುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅಲ್ಪ ಪ್ರಮಾಣದ ಪರಿಹಾರ ಘೋಷಿಸಿದ್ದರೆ, ಅದು ಕಾಂಗ್ರೆಸ್ ಒತ್ತಡ ಹೇರಿದ್ದರಿಂದ’ ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ರಕ್ಷಾ ರಾಮಯ್ಯ,’ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ನಂತರ ಎರಡು ತಿಂಗಳಿನಿಂದ ಯುವ ಕಾಂಗ್ರೆಸ್ ಜನರಿಗೆ ನೆರವಾಗುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’ ಎಂದರು.