Breaking News

ಭಾಷೆಗಳ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಕಡೆಗಣಿಸಿರುವ ಲೋಕಸಭಾ ಸಚಿವಾಲಯ

Spread the love

ಬೆಂಗಳೂರು: ಭಾಷೆಗಳ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಕಡೆಗಣಿಸಿರುವ ಲೋಕಸಭಾ ಸಚಿವಾಲಯದ ‘ಪಾರ್ಲಿಮೆಂಟರಿ ರಿಸರ್ಚ್ ಆಯಂಡ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ’ (ಪ್ರೈಡ್) ಸಂಸ್ಥೆಯ ನಡೆಗೆ ಖಂಡನೆ ವ್ಯಕ್ತವಾಗಿದೆ.

ಸಂಸ್ಥೆಯು ಆನ್‌ಲೈನ್ ಮೂಲಕ ಇದೇ 22ರಿಂದ 6 ವಿದೇಶಿ ಭಾಷೆಗಳು, 6 ದೇಶಿಯ ಭಾಷೆಗಳ ಕಲಿಕಾ ತರಬೇತಿಯನ್ನು ಪ್ರಾರಂಭಿಸುತ್ತಿದೆ. ಇದರಲ್ಲಿ ಸಂಸತ್ತಿನ ಸದಸ್ಯರು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕರು ಹಾಗೂ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ವಿದೇಶಿ ಭಾಷೆಗಳಾದ ಫ್ರೆಂಚ್, ಜರ್ಮನ್, ಜಪಾನೀಸ್, ಪೊರ್ಚುಗೀಸ್, ರಷ್ಯನ್ ಮತ್ತು ಸ್ಪ್ಯಾನಿಷ್ ಭಾಷೆಗಳನ್ನು ಕಲಿಸಲಾಗುತ್ತಿದೆ. ಅದೇ ರೀತಿ, ದೇಶೀಯ ಭಾಷೆಗಳಾದ ಗುಜರಾತಿ, ಬಂಗಾಳಿ, ಮರಾಠಿ, ಒಡಿಯಾ, ತಮಿಳು ಮತ್ತು ತೆಲುಗು ಭಾಷೆಯು ಈ ಕಲಿಕೆಯ ಭಾಗವಾಗಿದೆ.

‘ಕೇಂದ್ರ ಸರ್ಕಾರದಿಂದ ಶಾಸ್ತ್ರಿಯ ಭಾಷೆಯ ಸ್ಥಾನಮಾನ ಪಡೆದ ಕೆಲವೇ ಭಾಷೆಗಳಲ್ಲಿ ಕನ್ನಡ ಭಾಷೆಯೂ ಒಂದಾಗಿದೆ. ಸುದೀರ್ಘ ಇತಿಹಾಸ ಇರುವ ಕನ್ನಡ ಭಾಷೆಯನ್ನು ಲೋಕಸಭಾ ಸಚಿವಾಲಯ ಕಡೆಗಣಿಸಿರುವುದು ವಿಷಾದನೀಯ. ಈ ಬಗ್ಗೆ ಸಂಸ್ಥೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಒತ್ತಾಯಿಸಬೇಕು’ ಎಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ.

ಸಂಸದರು ಕಾರ್ಯನಿರತರಾಗಲಿ: ‘ದೇಶದ ಅತ್ಯಂತ ಪ್ರಾಚೀನ ಮತ್ತು ಶ್ರೀಮಂತ ಪರಂಪರೆಯ ಶಾಸ್ತ್ರೀಯ ಭಾಷೆಯಾಗಿರುವ ಕನ್ನಡವನ್ನು ಭಾಷೆಗಳ ಕಲಿಕೆಯಲ್ಲಿ ಸೇರಿಸಿಲ್ಲ. ಲೋಕಸಭಾ ಸಚಿವಾಲಯದ ಈ ನಡೆಯು ಖಂಡಿನೀಯ. ಸ್ವಾತಂತ್ರ್ಯ ಬಂದ ನಂತರ ನಿರಂತರವಾಗಿ ಕೇಂದ್ರ ಸರ್ಕಾರವು ಕನ್ನಡದ ಬಗ್ಗೆ ಮಲತಾಯಿ ಧೋರಣೆಯನ್ನು ತೋರುತ್ತಿದೆ. ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಎಲ್ಲ ಸಂಸದರು ಒಗ್ಗಟ್ಟಿನಿಂದ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ, ಕೇಂದ್ರ ಸರ್ಕಾರವು ಕನ್ನಡದ ಬಗೆಗಿನ ಧೋರಣೆಯನ್ನು ಬದಲಾಸಿಕೊಳ್ಳುವಂತೆ ಆಗ್ರಹಿಸಬೇಕು’ ಎಂದು ಕನ್ನಡ ಗೆಳೆಯರ ಬಳಗ ಒತ್ತಾಯಿಸಿದೆ.

‘ಪ್ರೈಡ್‌ನ ಅಧಿಕಾರಿಗಳು ನಮ್ಮ ಭಾಷೆಯನ್ನು ಕಡೆಗಣಿಸಿ, ಕನ್ನಡಿಗರನ್ನು ಅವಮಾನಿಸಿದ್ದಾರೆ. ಭಾರತೀಯ ಭಾಷೆಗಳ ಆಯ್ಕೆಯ ಹಿಂದಿರುವ ತಾತ್ವಿಕತೆಯನ್ನು ಪ್ರಶ್ನಿಸುವ ಹಕ್ಕು ಎಲ್ಲ ಭಾರತೀಯರಿಗಿದ್ದು, ಕನ್ನಡಿಗರು ಸಾಮಾಜಿಕ ಜಾಲ ತಾಣಗಳ ಮೂಲಕ ಇದನ್ನು ಪ್ರಶ್ನಿಸಬೇಕಿದೆ’ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಭಾಷೆಯ ಆಯ್ಕೆಗೆ ಮಾನದಂಡ ಏನು’

‘ಕನ್ನಡ ಭಾಷೆಯು 2 ಸಾವಿರ ವರ್ಷಗಳಿಗೂ ಮಿಗಿಲಾದ ಇತಿಹಾಸ ಹೊಂದಿದೆ. ಲೋಕಸಭಾ ಸಚಿವಾಲಯ ಕನ್ನಡವನ್ನು ಕಡೆಗಣಿಸಿರುವುದು ಅತ್ಯಂತ ಬೇಸರದ ಸಂಗತಿ. ಯಾವ ಮಾನದಂಡದಡಿ ಭಾಷೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ? ಈ ಕೂಡಲೇ ಕನ್ನಡ ಸೇರ್ಪಡೆಗೆ ಕೇಂದ್ರ ಸರ್ಕಾರವು ಕ್ರಮವಹಿಸಬೇಕು. ಇಲ್ಲವಾದರೇ ಇಲ್ಲಿನ ಸಂಸದರ ಸಹಕಾರದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಎಚ್ಚರಿಕೆ ನೀಡಿದ್ದಾರೆ.

‘ಭಾರತೀಯ ಭಾಷೆಗಳ ಆಯ್ಕೆಯನ್ನು ಪ್ರಶ್ನಿಸಬೇಕಿದೆ. ಈ ಬಗ್ಗೆ ನಮ್ಮ ಸಂಸದರು ಕೂಡ ಒಗ್ಗಟ್ಟಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. ಸಂವಿಧಾನದ ಎಂಟನೇ ಅನುಚ್ಛೇದಡಿ ಮಾನ್ಯತೆ ಪಡೆದ ಕನ್ನಡವನ್ನು ಕಲಿಕಾ ಕಾರ್ಯಕ್ರಮದ ಪಟ್ಟಿಯಲ್ಲಿ ಸೇರಿಸಬೇಕು’ ಎಂದು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ