ಬಳ್ಳಾರಿ, ಜೂ.13: ಕೊರೊನಾದ ಈ ಸಂಕಷ್ಟದ ಸಂದರ್ಭದಲ್ಲಿ ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಕೇಂದ್ರ ಸರ್ಕಾರದ ವಿರುದ್ದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದ್ದು, ”ಜನರಿಗೆ ಇಷ್ಟೆಲ್ಲ ಅನ್ಯಾಯ ಮಾಡುವ ಪ್ರಧಾನಿ ನರೇಂದ್ರ ಮೋದಿ ಭಸ್ಮಾಸುರನಂತೆ ಸುಟ್ಟು ನಾಶವಾಗುತ್ತಾರೆ” ಎಂದು ಕಿಡಿಕಾರಿದ್ದಾರೆ.
ದೇಶದಲ್ಲಿ ಕಳೆದ ಹಲವು ದಿನಗಳಿಂದ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಿದ್ದು, ದೇಶದ ಅನೇಕ ನಗರಗಳಲ್ಲಿ ಪೆಟ್ರೋಲ್ ದರ 100ರ ಗಡಿ ದಾಟಿದೆ. ಡೀಸೆಲ್ ದರವೂ ಕೆಲವು ನಗರಗಳಲ್ಲಿ ಮೂರಂಕಿ ಮುಟ್ಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 99.33 ಗೆ ಏರಿದೆ. ಡೀಸೆಲ್ ದರ ಪ್ರತಿ ಲೀಟರ್‌ಗೆ 92.21 ಆಗಿದೆ.
ಭಾನುವಾರ ನಗರದಲ್ಲಿ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿದ ಪ್ರತಿಭಟಿಸಿ ಪತ್ರಿಕಾಗೋಷ್ಠಿ ನಡೆಸಿದ ಉಗ್ರಪ್ಪ, ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ”ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೈಲ್ ದರ, ಇತರೆ ಅಗತ್ಯ ವಸ್ತುಗಳ ದರ ಅಧಿಕ ಮಾಡುವ ಮೂಲಕ ಜನರನ್ನು ಸಾಲದ ಕೂಪಕ್ಕೆ ತಳ್ಳುತ್ತಿದ್ದಾರೆ” ಎಂದು ದೂರಿದ್ದಾರೆ.
”ಇದೇನಾ ನಿಮ್ಮ ಅಚ್ಚೆ ದಿನ್”

ದೇಶದಲ್ಲಿ ಈ ಕೊರೊನಾ ಸಂಕಷ್ಟದ ನಡುವೆ ಹಲವು ಅಗತ್ಯ ವಸ್ತುಗಳ ಹಾಗೂ ಇಂಧನ ಬೆಲೆ ಏರಿಕೆಯಾಗುತ್ತಿದೆ. ಈ ಬೆಲೆ ಏರಿಕೆ ವಿಚಾರಕ್ಕೆ ಬಿಜೆಪಿ ಅಚ್ಚೆ ದಿನ್ ಘೋಷವಾಕ್ಯವನ್ನು ಬಳಸಿಕೊಂಡು ಟೀಕೆ ಮಾಡಿರುವ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ”ಇದೇನಾ ನಿಮ್ಮ ಅಚ್ಚೆ ದಿನ್” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಪ್ರಶ್ನಿಸಿದ್ದಾರೆ. ”ನೀವು ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದಿರಿ, ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಾಸ್ ತರಲಾಗುವುದು ಎಂದು ಹೇಳಿದ್ದಿರಿ, ಬಡ ಜನರ ಬ್ಯಾಂಕ್ ಖಾತೆಗೆ ಹಣ ಹಾಕಲಾಗುವುದು ಎಂದು ಭರವಸೆ ನೀಡಿದಿರಿ, ಆದರೆ ಅವೆಲ್ಲಾ ಭರವಸೆ ಈಡೇರಿಸುವುದು ಯಾವಾಗ?. ಕೊರೊನಾ ಸಂದರ್ಭದಲ್ಲಿ ಈಗಾಗಲೇ ಜನರು ಸಂಕಷ್ಟದಲ್ಲಿದ್ದಾರೆ, ಈ ಸಂದರ್ಭದಲ್ಲಿ ಸರ್ಕಾರ ಬೆಲೆ ಏರಿಕೆ ಮಾಡಿ ಜನರ ಗಾಯ ಮೇಲೆ ಬರೆ ಎಳೆದಿದೆ” ಎಂದು ಆಕ್ರೋಶಗೊಂಡಿದ್ದಾರೆ.
”ಜನರ ಆಕ್ರೋಶದಿಂದ ಮೋದಿ ಭಸ್ಮಾಸುರನಂತೆ ನಾಶ”

”ಈ ರೀತಿ ಜನರಿಗೆ ಕಷ್ಟವನ್ನು ನೀಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಜನರ ಆಕ್ರೋಶದಿಂದ ಭಸ್ಮಾಸುರನಂತೆ ನಾಶವಾಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಆಧುನಿಕ ಭಸ್ಮಾಸುರ, ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದೃತರಾಷ್ಟ್ರ. ಸಮಯಸಾಧಕ ಮೋದಿ, ದೇಶದ ಅತ್ಯಂತ ದುರ್ಬಲ ಪ್ರಧಾನಿ. ಮೋದಿ ಚುನಾವಣೆ, ಅದರ ಬಗ್ಗೆಗಿನ ಸಭೆ ಇದ್ದರೆ ಬೇಗ ಹೋಗುತ್ತಾರೆ, ಆದರೆ ಕೊರೊನಾ ಬಗ್ಗೆಗಿನ ಸಭೆ ಇದ್ದರೆ ಮಾತ್ರ ಹೋಗುವುದಿಲ್ಲ” ಎಂದು ವಿ.ಎಸ್. ಉಗ್ರಪ್ಪ ಆರೋಪಿಸಿದರು. ಇನ್ನು ಈ ಹಿಂದೆ ಉಗ್ರಪ್ಪನವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮಾಡರ್ನ್ ಭಸ್ಮಾಸರರು ಎಂದು ಟೀಕಿಸಿದ್ದರು.