ಮಡಿಕೇರಿ ಕೊರೋನ ಮಹಾಮಾರಿ ರಣಕೇಕೆ ಹಾಕುತ್ತಿರಬೇಕಾದರೆ ರೋಗ ಹರಡದ ರೀತಿಯಲ್ಲಿ ಸಮಾಜಮುಖಿ ಕೆಲಸ ಮಾಡಬೇಕಾದ ಸಮಾಜವನ್ನು ತಿದ್ದಬೇಕಾದ ಪತ್ರಕರ್ತನೊಬ್ಬ ವೃತ್ತಿಗೇ ಅವಮಾನಕಾರಿ ವರ್ತನೆ ತೋರಿದ್ದಾರೆ. ಕೊರೋನಾ ಫ್ರಂಟ್ ಲೈನ್ ವಾರಿಯರ್ಸ್ ಆಗಿರಬೇಕಾದ ಪತ್ರಕರ್ತ ನಕಲಿ ನೆಗೆಟಿವ್ ವರದಿ ತಯಾರಿಸಿ ಮಾರಾಟ ಮಾಡಿ ಸಿಕ್ಕು ಬಿದ್ದಿದ್ದಾರೆ.
ಕರ್ನಾಟಕದಿಂದ ಕೇರಳಕ್ಕೆ ಹೋಗುವವರಿಗೆ ಕೊರೋನಾ ನೆಗಟೀವ್ ರಿಪೋರ್ಟ್ ಕಡ್ಡಾಯವಾಗಿದ್ದು, ವೀರಾಜಪೇಟೆ ತಾಳಳೂಕು ಸಿದ್ಧಾಪುರದ ವಿಜಯವಾಣಿ ಪತ್ರಿಕೆಯ ವರದಿಗಾರ ಅಬ್ದುಲ್ ಅಜೀಜ್ ಎಂಬಾತ ಕೇರಳಕ್ಕೆ ಗಿಡ ತಗೊಂಡು ಹೋಗುವವರಿಗೆ ಮತ್ತು ಕೇರಳಕ್ಕೆ ಪ್ರಯಾಣಿಸುವವರಿಗೆ ತನ್ನ ಸ್ಟುಡಿಯೋದಲ್ಲಿಯೇ ಕೂತು ಯಾವುದೇ ಟೆಸ್ಟ್ ಮಾಡಿಸದೇ, ಪುಡಿಗಾಸಿಗಾಗಿ ನಕಲಿ ನೆಗಟೀವ್ ರಿಪೋರ್ಟ್ ಕೊಡುವಂತಹ ಕೆಲಸ ಮಾಡಿ ಮಾಧ್ಯಮದ ಘನತೆಯನ್ನೆ ಕುಗ್ಗಿಸಿದ್ದಾರೆ. ಮಡಿಕೇರಿ ಸರ್ಕಲ್ ಇನ್ಸ್ಪೆಕ್ಟರ್ ಅನೂಪ್ ಮಾದಪ್ಪನವರು ಈತನನ್ನು ಬಂಧಿಸಿದ್ದಾರೆ.
ಕೊಡಗಿನಿಂದ ಕೇರಳದ ಕಡೆ ತೆರಳುವ ವಾಹನಗಳನ್ನು ಗಡಿಯಲ್ಲಿ ತಪಾಸಣೆ ಮಾಡುವಾಗ ಚೆಕ್ ಪೋಸ್ಟ್ ನಲ್ಲಿ ನಕಲಿ ನೆಗೆಟಿವ್ ಸರ್ಟಿಫಿಕೇಟ್ ಪತ್ತೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೋಲೀಸರು ತನಿಖೆ ನಡೆಸಿದಾಗ ನೆಗೆಟಿವ್ ರಿಪೋರ್ಟ್ ತಯಾರಕ ಸಿಕ್ಕು ಬಿದ್ದಿದ್ದಾನೆ. ಈತ ಎಷ್ಟು ಜನರಿಗೆ ಈ ರೀತಿ ನಕಲಿ ವರದಿ ನೀಡಿದ್ದಾನೆ ಎಂದು ಖಚಿತವಾಗಿ ತಿಳಿದು ಬಂದಿಲ್ಲ. ಈತನ ವಿರುದ್ದ ಕುಟ್ಟ ಪೋಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು ತನಿಖೆ ಮುಂದುವರೆದಿದೆ. ಜಿಲ್ಲೆಯಲ್ಲಿ ನಕಲಿ ವರದಿ ಕುರಿತ ಆರೋಪಿಯನ್ನು ಬಂಧಿಸಿದ ಮೊದಲ ಪ್ರಕರಣ ಇದಾಗಿದೆ.