Breaking News
Home / ರಾಜಕೀಯ / ಎಂತ ಕಾಲ ಬಂತು: ಮೃತ ಸೋಂಕಿತರ ಅಂತ್ಯಕ್ರಿಯೆ ನೆರವೇರಿಸಲು ಟೆಂಡರ್ ಆಹ್ವಾನ!

ಎಂತ ಕಾಲ ಬಂತು: ಮೃತ ಸೋಂಕಿತರ ಅಂತ್ಯಕ್ರಿಯೆ ನೆರವೇರಿಸಲು ಟೆಂಡರ್ ಆಹ್ವಾನ!

Spread the love

ಚಾಮರಾಜನಗರ ( ಮೇ 21) ಹಲವೆಡೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಲು ಹಿಂಜರಿಯುತ್ತಿರುವುದು ಕಂಡು ಬರುತ್ತಿದೆ. ಇದನ್ನು ಮನಗಂಡ ಸ್ವಯಂ ಸೇವಾ ತಂಡಗಳು ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಮುಂಜಾಗ್ರತಾ ಕ್ರಮಗಳೊಂದಿಗೆ ಮೃತ ಸೋಂಕಿತರ ಅಂತ್ಯ ಸಂಸ್ಕಾರ ನೆರವೇರಿಸುತ್ತಾ ಬಂದಿವೆ. ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆ ನೆರವೇರಿಸಲೆಂದೇ ಚಾಮರಾಜನಗರ ಜಿಲ್ಲಾಡಳಿತ ಯಡಬೆಟ್ಟದ ಬಳಿ ಭೂಮಿಯನ್ನು ನಿಗದಿಪಡಿಸಿದೆ. ಸೋಂಕಿನಿಂದ ಮೃತಪಟ್ಟ ಹಲವಾರು ಮಂದಿಯ ಅಂತ್ಯಸಂಸ್ಕಾರವನ್ನು ಸ್ವಯಂ ಸೇವಕರು ಇಲ್ಲಿ ನೆರವೇರಿಸುತ್ತಾ ಬಂದಿದ್ದಾರೆ. ಮೃತರ ಸಂಬಂಧಿಕರು ಸ್ವಂತ ಜಮೀನುಗಳಲ್ಲೇ ಮಾಡಲು ಇಚ್ಚಿಸಿದಲ್ಲಿ ಅಂತಹವರ ಶವಗಳನ್ನು ಅಲ್ಲಿಗೆ ಆಯಂಬುಲೆನ್ಸ್ ನಲ್ಲಿ ಕೊಂಡೊಯ್ದು ಅಂತ್ಯಕ್ರಿಯೆ ಮಾಡುತ್ತಾ ಬಂದಿದ್ದಾರೆ

ಈ ನಡುವೆ ಕೋವಿಡ್ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗುವವರ ಅಂತ್ಯಕ್ರಿಯೆಯನ್ನು ಕೋವಿಡ್-19 ನಿಯಮಾವಳಿ ಹಾಗೂ ಮೃತ ಕುಟುಂಬದವರ ಇಚ್ಚೆಯಂತೆ ನೆರವೇರಿಸಲು ಆಸಕ್ತಿವುಳ್ಳ ಕಂಪನಿ, ಏಜೆನ್ಸಿ, ಸಂಘ ಸಂಸ್ಥೆಗಳಿಂದ ಚಾಮರಾಜನಗರ ಜಿಲ್ಲಾಡಳಿತ ಅರ್ಜಿ ಆಹ್ವಾನಿಸಲಾಗಿದೆ. ಕೋವಿಡ್ ಗೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗುವವರನ್ನು ಕೋವಿಡ್-19 ನಿಯಮಾವಳಿ ಪ್ರಕಾರ ಹಾಗೂ ಮೃತರ ಕುಟುಂಬಸ್ಥರು, ವಾರಸುದಾರರ ಇಚ್ಚೆಯಂತೆ ಗುಂಡಿ ತೋಡಿ ಸಮಾಧಿ ಮಾಡುವುದರ ಮೂಲಕ ಅಥವಾ ಚಿತಾಗಾರದಲ್ಲಿ ಶವವನ್ನು ಸುಡುವ ಮೂಲಕ ಅಂತ್ಯಕ್ರಿಯೆ ನಡೆಸಬೇಕಿದೆ. ಅಂತ್ಯಕ್ರಿಯೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನೆರವೇರಿಸಲು ಆಸಕ್ತಿಯುಳ್ಳ ಕಂಪನಿ, ಏಜೆನ್ಸಿ, ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು. ಅಂತ್ಯಕ್ರಿಯೆ ನೆರವೇರಿಸಲು ಸರ್ಕಾರ ತಿಳಿಸುವ ದರ ಅಥವಾ ಸೂಕ್ತ ದರವನ್ನು ನಿಗದಿಪಡಿಸಲಾಗುವುದು. ಅರ್ಜಿಯಲ್ಲಿ ಸಂಸ್ಥೆಯ ಹೆಸರು, ವಿಳಾಸ, ಸಂಪರ್ಕಿಸಬೇಕಾದ ವ್ಯಕ್ತಿಯ ಹೆಸರು ಹಾಗೂ ಅಂತ್ಯ ಸಂಸ್ಕಾರ ಕಾರ್ಯಕ್ಕಾಗಿ ಎಷ್ಟು ವ್ಯಕ್ತಿಗಳನ್ನು ಒದಗಿಸಲಾಗುವುದು ಎಂಬ ಬಗ್ಗೆ ಮತ್ತು ಅವರ ವಿವರವನ್ನು (ಮೊಬೈಲ್ ಸಂಖ್ಯೆ ಸಹಿತ) ನಮೂದು ಮಾಡಬೇಕು. ಅರ್ಜಿ ಸಲ್ಲಿಸಲು ಇಚ್ಚಿಸುವವರು ಅತ್ಯಂತ ಕಡಿಮೆ ದರ ಸೂಚಿಸುವ ದರಪಟ್ಟಿಯನ್ನು ಮೊಹರಾದ ಲಕೋಟೆಯಲ್ಲಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಕೊಠಡಿ ಸಂಖ್ಯೆ 106ರಲ್ಲಿ ಇಟ್ಟಿರುವ ಬಾಕ್ಸ್ ಗೆ ಹಾಕಬೇಕೆಂದು ತಿಳಿಸಲಾಗಿದೆ

ಸ್ವೀಕರಿಸಲಾದ ಅರ್ಜಿಗಳನ್ನು ಅರ್ಜಿ ಸಲ್ಲಿಸುವವರ ಸಮ್ಮುಖದಲ್ಲಿ ಮೇ 25ರಂದು ಬೆಳಿಗ್ಗೆ 11 ಗಂಟೆಗೆ ತೆರೆಯಲಾಗುತ್ತದೆ. ಅರ್ಜಿಗಳನ್ನು ಒಪ್ಪುವ ಅಥವಾ ನಿರಾಕರಿಸುವ ಹಕ್ಕನ್ನು ಜಿಲ್ಲಾಧಿಕಾರಿ ಹೊಂದಿರುತ್ತಾರೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದ್ದಾರೆ.

ಕೋವಿಡ್-19 ಎರಡನೇ ಅಲೆಯು ತೀವ್ರವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಾಗಲಿ ಹೆಚ್ಚು ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸದೇ ಸೋಂಕು ವ್ಯಾಪಿಸದಂತೆ ತಡೆಯಲು ಸಹಕರಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಅಂತ್ಯಸಂಸ್ಕಾರದ ವೇಳೆ ಗರಿಷ್ಟ ಐದು ಮಂದಿಗಿಂತ ಹೆಚ್ಚು ಜನರು ಪಾಲ್ಗೊಳ್ಳಲು ಅವಕಾಶವಿಲ್ಲ. ಆದರೆ ಜಿಲ್ಲೆಯ ಹಲವೆಡೆ ಅಂತ್ಯಕ್ರಿಯೆ ವೇಳೆ ಹೆಚ್ಚು ಜನರು ಭಾಗವಹಿಸುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಜಿಲ್ಲೆಯ ಜನತೆ ಕೊರೋನಾ ಪ್ರಕರಣಗಳು ಏರುಮುಖವಾಗುತ್ತಿರುವ ಪ್ರಸ್ತುತ ಸಂದರ್ಭ ಗಮನಿಸಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು. ಅಂತ್ಯಕ್ರಿಯೆ ವೇಳೆ ಹೆಚ್ಚು ಜನರು ಗುಂಪುಗೂಡಿ ಭಾಗವಹಿಸುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಸೋಂಕು ಹರಡಲು ಕಾರಣವಾಗಬಹುದು. ಹೀಗಾಗಿ ಅಂತ್ಯಕ್ರಿಯೆ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಯಲ್ಲಿ ತಿಳಿಸಿರುವ ಸಂಖ್ಯೆಯಷ್ಟು ಜನರು ಮಾತ್ರ ಭಾಗವಹಿಸಬೇಕು.ಜೊತೆಗೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳಿಗೆ ಬದ್ಧರಾಗಿರಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.ಅಂತ್ಯಕ್ರಿಯೆ ಸಂದರ್ಭದಲ್ಲಿ ಭಾಗವಹಿಸುವ ವೇಳೆ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅಂತ್ಯಕ್ರಿಯೆ ವೇಳೆ ಜನರು ಸೀಮಿತ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕೋವಿಡ್ ಹರಡದಂತೆ ತಡೆಯಲು ಜಿಲ್ಲಾಡಳಿತದ ಜೊತೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮನವಿ ಮಾಡಿದ್ದಾರೆ


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ