ರಾಣಿಬೆನ್ನೂರು: ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳು ದೇಶದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡಲು ಕಾರಣವಾಗಿದೆ ಎಂದು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಆರೋಪಿಸಿದ್ದಾರೆ.
ಸ್ಥಳೀಯ ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, 2021ರ ಮಾರ್ಚ್‌ನಲ್ಲಿಯೇ ತಜ್ಞರು ಎರಡನೇ ಅಲೆಯ ಭೀಕರತೆ ಕುರಿತು ಸೂಚನೆ ನೀಡಿದ್ದರೂ ಕೇಂದ್ರ ಸರ್ಕಾರ ಅದನ್ನು ಕಡೆಗಣಿಸಿ ವಿದೇಶಗಳಿಗೆ ಲಸಿಕೆ ರಫ್ತು ಮಾಡಿತು.
ಕುಂಭಮೇಳದಲ್ಲಿ ಲಕ್ಷಾಂತರ ಜನರು ಸೇರಲು ಅವಕಾಶ ಮಾಡಿಕೊಟ್ಟಿದ್ದು ದೊಡ್ಡ ತಪ್ಪು. ರಾಜ್ಯದಲ್ಲಿ ಬೆಡ್, ಆಕ್ಸಿಜನ್, ಲಸಿಕೆ, ರೆಮ್‌ಡೆಸಿವರ್ ಮಾತ್ರ ಕೊರತೆಯಾಗಿದೆ. 14 ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆಯಾದರೂ ರಾಜ್ಯಕ್ಕೆ ಮಾತ್ರ ಅಗತ್ಯಕ್ಕೆ ತಕ್ಕಷ್ಟು ಸಿಗುತ್ತಿಲ್ಲ. ಈ ವಿಚಾರದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಿ ಆಕ್ಸಿಜನ್ ಪೂರೈಸುವಂತೆ ಸೂಚಿಸಿದರೂ ಅದನ್ನು ಪಾಲಿಸುವ ಬದಲು ಕೇಂದ್ರ ಸರ್ಕಾರ ತೀರ್ಪಿನ ವಿರುದ್ಧ ಸುಪ್ರಿಂಕೋರ್ಟ್ ಮೊರೆ ಹೋಯಿತು. ಆದರೆ ಸುಪ್ರಿಂ ಕೋರ್ಟ್ ಕೂಡಾ ಹೈಕೋರ್ಟ್ ಆದೇಶ ಎತ್ತಿ ಹಿಡಿಯಿತು. ಸರ್ಕಾರ ನಿರ್ಲಕ್ಷ್ಯ ಮಾಡಿದರೂ ನ್ಯಾಯಾಂಗ ಸಹಾಯ ಮಾಡಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಠಿಣ ಕರ್ಪ್ಯೂ ಜಾರಿಗೊಳಿಸಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ದುಸ್ತರವಾಗಿದೆ. ಬೇರೆ ರಾಜ್ಯಗಳಲ್ಲಿ ಈ ರೀತಿಯ ಕಠಿಣ ಕರ್ಫ್ಯೂ ಜಾರಿಗೊಳಿಸಿದ ನಂತರ ಪ್ಯಾಕೇಜ್ ಘೋಷಿಸಲಾಗಿದೆ. ನಮ್ಮಲ್ಲಿ ಅದನ್ನು ಘೋಷಣೆ ಮಾಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಾ ಬಂದಿದ್ದರೂ ಅದಕ್ಕೆ ಬೆಲೆ ನೀಡದಿರುವುದು ನಿಜಕ್ಕೂ ವಿಪರಾರಯಸದ ಸಂಗತಿಯಾಗಿದೆ.
ಶೀಘ್ರದಲ್ಲಿ ಮೂರನೇ ಅಲೆ ಪ್ರಾರಂಭವಾಗಲಿದ್ದು, ಕನಿಷ್ಠ ಪಕ್ಷ ಅದನ್ನು ಎದುರಿಸಲು ಈಗಿನಿಂದಲೇ ಸಮರ್ಪಕ ತಯಾರಿ ಮಾಡಿಕೊಳ್ಳುವುದು ಸೂಕ್ತ ಎಂದರು.
ಪಿಕೆಕೆ ಇನಿಷಿಯೇಟಿವ್ಸ್ ಅಧ್ಯಕ್ಷ ಪ್ರಕಾಶ ಕೋಳಿವಾಡ ಮಾತನಾಡಿ, ತಮ್ಮ ಸಂಸ್ಥೆಯ ವತಿಯಿಂದ 100 ಆಕ್ಸಿ ಪಲ್ಸ್ ಮೀಟರ್ ಖರೀದಿಸಲಾಗಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೂಲಕ ಪ್ರತಿ ಮನೆಗೂ ಭೇಟಿ ನೀಡಿ ತಪಾಸಣೆ ಮಾಡಲಾಗುವುದು. ಈ ಸಂದರ್ಭದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಲ್ಲಿ ಆಯಂಬುಲೆನ್ಸ್, ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುವುದು. ಗಂಭೀರ ಪರಿಸ್ಥಿತಿಯಲ್ಲಿ ರೋಗಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಸರ್ಕಾರಿ ಆಯಂಬುಲೆನ್ಸ್‌ಗಳಿಗೆ ಎರಡು ವೆಂಟಿಲೆಟರ್ ಒದಗಿಸುವ ಚಿಂತನೆಯಿದೆ.
ಲಸಿಕೆ ಹಂಚಿಕೆ ಸಲುವಾಗಿ 18- 44 ವಯೋಮಾನದವರ ನೋಂದಣಿಯನ್ನು ಸಂಸ್ಥೆ ಮಾಡಲಿದ್ದು ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಲಾಗಿದೆ ಎಂದರು.
Laxmi News 24×7