ವಿಜಯಪುರ: ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಿ ಪೊಲೀಸರು ಎಲ್ಲೆಡೆ ನಾಕಾ ಬಂದಿ ಹಾಕಿ ಕಾವಲು ಕಾಯುತ್ತಿದ್ದಾರೆ. ಇಷ್ಟಾಗಿಯೂ ಕೆಲವು ಮಂದಿ ಕಾನೂನು ಹಾಗೂ ಕಟ್ಟುನಿಟ್ಟು ನಿಯಮಗಳನ್ನು ತಪ್ಪಿಸಿ ಓಡಾಡಲು ಪ್ರಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆಗಳು ಕೇಳಿಬರುತ್ತಿವೆ. ಇಂತಹದ್ದೇ ಮತ್ತೊಂದು ವಿಜಯಪುರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಅರ್ಜೆಂಟ್ ಕೋವಿಡ್-19 ಆನ್ ಡ್ಯೂಟಿ’ ಎಂದು ಕಾರಿಗೆ ಬೋರ್ಡ್ ಹಾಕಿಕೊಂಡು ಅರ್ಚಕರನ್ನು ಕರೆದೊಯ್ಯುತ್ತಿದ್ದ ಕಾರು ಕಂಡುಬಂದಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಾರಂಭದಲ್ಲಿ ಕೋವಿಡ್ ವಾರ್ರಿಯರ್ಸ್ ಬಳಸುವ ವಾಹನ ಎಂದು ಭಾವಿಸಿದ್ದ ಪೊಲೀಸರಿಗೆ ಒಳಗೆ ಕೂತಿದ್ದ ಆಚಾರ್ಯರು ಕಾಣಿಸಿಕೊಂಡಿದ್ದಾರೆ. ತಕ್ಷಣ ನಿಲ್ಲಿಸಿ ಕಾರಿನಲ್ಲಿದ್ದ ಜನರನ್ನು ಕೆಳಗಿಳಿಸಿ ಕಾರನ್ನು ಸೀಜ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ರಾಜ್ಯಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಜನರ ಇಂತಹ ವರ್ತನೆಗಳು ಬೆಳಕಿಗೆ ಬರುವುದು ಹೆಚ್ಚಾಗಿದೆ. ಇದರಿಂದಾಗಿ ಪೊಲೀಸರಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದು ಕಷ್ಟವಾಗುತ್ತಿದ್ದು, ಅದರೊಂದಿಗೆ ಸರ್ಕಾರ ನೀಡಿರುವ ಅವಕಾಶಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ.