ಮೈಸೂರು: ಪಡಿತರ ಕಾರ್ಡ್ ಇರೋರಿಗೆ ಪಡಿತರ ಕೊಡ್ತಾರೆ ಆದರೆ ಕಾರ್ಡ್ ಇಲ್ಲದೆ ಇರೋರ ಗತಿ ಏನೂ ಎಂದು ಬಹಳಷ್ಟು ಜನ ಪ್ರಶ್ನಿಸಿದ್ದರು. ಈಗ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆ ಪ್ರಶ್ನೆಗೆ ಸ್ಥಳೀಯ ಶಾಸಕ ಜಿ.ಟಿ ದೇವೇಗೌಡ ಉತ್ತರ ನೀಡಿದ್ದು, ಡಿಸಿಸಿ ಬ್ಯಾಂಕ್ ಜೊತೆಗೂಡಿ ಪಡಿತರ ಕಾರ್ಡ್ ಇಲ್ಲದವರ ನೆರವಿಗೆ ಧಾವಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಟ್ಟು 5 ಸಾವಿರ ಜನರ ಬಳಿ ಯಾವುದೇ ಪಡಿತರ ಕಾರ್ಡ್ ಇಲ್ಲ. ಹೀಗಾಗಿ ಇವರಿಗೆ 10 ಕೆಜಿ ಅಕ್ಕಿ, 1 ಕೆಜಿ ಗೋಧಿ ಹಿಟ್ಟು, 1 ಕೆಜಿ ಉಪ್ಪು, 1 ಕೆಜಿ ಬೇಳೆ ಹಾಗೂ 1 ಲೀಟರ್ ಅಡುಗೆ ಎಣ್ಣೆಯನ್ನು ತಲುಪಿಸುವ ಕಾರ್ಯ ಶುರುವಾಗಿದೆ.
10 ರೂ.ಗೆ 1 ಕೆಜಿ ತರಕಾರಿ, 20 ರೂ.ಗೆ ಅಕ್ಕಿ :
ಮೈಸೂರಿನಲ್ಲಿ ಎಸ್‍ಎಂಪಿ ಫೌಂಡೇಶನ್ ಜನರಿಗೆ ಕಡಿಮೆ ಬೆಲೆಗೆ ತರಕಾರಿ ಹಾಗೂ ಅಕ್ಕಿಯನ್ನು ನೀಡುತ್ತಿದೆ. ಯಾವುದೇ ತರಕಾರಿ ಖರೀದಿ ಮಾಡಿ ಕೆಜಿಗೆ 10 ರೂಪಾಯಿ, ಗುಣಮಟ್ಟದ ಅಕ್ಕಿ ಕೆಜಿಗೆ 20 ರೂಪಾಯಿಯಂತೆ ಮಾರಾಟ ಮಾಡುತ್ತಿದೆ. ಅಲ್ಲದೆ ಜನರ ಮನೆ ಬಾಗಿಲಿಗೆ ಇವುಗಳನ್ನು ಸರಬರಾಜು ಮಾಡುತ್ತಿದೆ. ಲಾಕ್‍ಡೌನ್ ಮುಗಿಯೋವರೆಗೆ ಈ ರೀತಿ ಮನೆ ಮನೆಗೆ ಕಡಮೆ ದರದಲ್ಲಿ ತರಕಾರಿ ಹಾಗೂ ಅಕ್ಕಿ ತಲುಪಿಸೋ ಕಾರ್ಯ ನಡೆಸಲಾಗುತ್ತದೆ ಎಂದು ಎಸ್‍ಎಂಪಿ ಫೌಂಡೇಶನ್ ತಿಳಿಸಿದೆ.
ಸುತ್ತೂರು ಶ್ರೀಗಳಿಂದ ಪಡಿತರ ವಿತರಣೆ:
ಮೈಸೂರು ನಾಗರೀಕ ವೇದಿಕೆಯಿಂದ 3 ಸಾವಿರ ದಿನಸಿ ಪೊಟ್ಟಣಗಳನ್ನು ವಿತರಿಸಲಾಯಿತು. ಸುತ್ತೂರು ಶ್ರೀ ದೇಶಿಕೇಂದ್ರ ಸ್ವಾಮೀಜಿ ಈ ಪದಾರ್ಥಗಳನ್ನು ಜನರಿಗೆ ವಿತರಿಸಿದರು. 5 ಕೆಜಿ ಅಕ್ಕಿ, 1 ಕೆಜಿ ಸಕ್ಕರೆ, 1 ಕೆಜಿ ಬೆಳೆ, ಕಾಲ್ಕೇಜಿ ಟೀ ಪುಡಿ, ಅರ್ಧ ಲೀಟರ್ ಅಡಿಗೆ ಎಣ್ಣೆ ಪಾಕೇಟ್ ಅನ್ನು ಮೈಸೂರಿನ ಗಿರಿಯಾಭೋವಿಪಾಳ್ಯದ ಜೆಎಸ್‍ಎಸ್ ಪ್ರೌಡ ಶಾಲೆ ಆವರಣದಲ್ಲಿ ವಿತರಿಸಲಾಯಿತು. ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಉದ್ಯಮಿಗಳಾದ ವಾಸುದೇವ ಭಟ್, ಬಾಲಸುಬ್ರಹ್ಮಣ್ಯಂ, ಗಿರಿ ಸೇರಿದಂತೆ ಪ್ರಮುಖರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.