ಉಡುಪಿ, ಮೇ 06; “ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಉಡುಪಿ ಜಿಲ್ಲೆಯಲ್ಲೂ ಕೂಡ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಜನತಾ ಲಾಕ್ ಡೌನ್ ನಿಂದ ನಿಯಂತ್ರಣ ಕಷ್ಟ ಅನಿಸುತ್ತಿದೆ. ಕಳೆದ ಬಾರಿಯಂತೆ ಸಂಪೂರ್ಣ ಲಾಕ್ ಡೌನ್ ಮಾಡಬೇಕು” ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಗುರುವಾರ ಉಡುಪಿಯಲ್ಲಿ ಮಾತನಾಡಿದ ಅವರು, “ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ ನೀಡಬೇಕು. ಉಳಿದಂತೆ ಪೂರ್ಣ ಲಾಕ್ ಡೌನ್ ಮಾಡಬೇಕು. ಜನ ಈಗಿನಂತೆ ಓಡಾಡಿದರೆ ಕೋವಿಡ್ ನಿಯಂತ್ರಣ ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.
“ಮದುವೆ, ದೇವಾಲಯದ ಕಾರ್ಯಕ್ರಮ, ಭೂತಾರಾಧನೆ ಎಲ್ಲವೂ ನಡೆಯುತ್ತಿದೆ. ಜನ ಹೆಚ್ಚು ಬೆರೆಯುವುದರಿಂದ ರೋಗ ಹರಡುತ್ತದೆ. ಮುಂಬೈ, ಬೆಂಗಳೂರಿನಿಂದಲೂ ಜನ ಜಿಲ್ಲೆಗೆ ಬರುತ್ತಿದ್ದಾರೆ. ಹೊರ ಜಿಲ್ಲೆಗಳಿಂದ ಬಂದವರಿಗೆ ಆದ್ಯತೆ ಮೇಲೆ ಪರೀಕ್ಷೆ ಮಾಡಿಸಬೇಕು” ಎಂದು ತಿಳಿಸಿದರು.
“ಇಂದಿನಿಂದಲೇ ಆಂಟಿಜೆನ್ ಟೆಸ್ಟ್ ಆರಂಭಿಸಲು ಸೂಚನೆ ನೀಡಿದ್ದೇನೆ. ಹೋಂ ಕ್ವಾರಂಟೈನ್ ಕಡ್ಡಾಯ ಮಾಡಬೇಕು. 15 ದಿನಗಳ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ. ಜನರು ಮನೆಯಿಂದ ಹೊರಬಂದರೆ ಚೈನ್ ಲಿಂಕ್ ಕಟ್ ಮಾಡಲು ಅಸಾಧ್ಯ” ಎಂದರು.
ಕರ್ನಾಟಕದಲ್ಲಿ ಏಪ್ರಿಲ್ 27ರಿಂದ ಮೇ 12ರ ಬೆಳಗ್ಗೆ 6 ಗಂಟೆ ತನಕ ಜನತಾ ಲಾಕ್ ಡೌನ್ ಜಾರಿಯಲ್ಲಿದೆ. ಆದರೆ, ರಾಜ್ಯದಲ್ಲಿ ಕೋವಿಡ್ ಹೊಸ ಸೋಂಕಿನ ಪ್ರಕರಣಗಳು ಕಡಿಮೆಯಾಗಿಲ್ಲ. ಬುಧವಾರ 50,112 ಹೊಸ ಪ್ರಕರಣ ರಾಜ್ಯದಲ್ಲಿ ದಾಖಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಬುಧವಾರ 1,655 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 35,365. ಜಿಲ್ಲೆಯಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,926.
Laxmi News 24×7