ಬೆಳಗಾವಿ: ಕೋವಿಡ್ ಸೋಂಕಿನಿಂದ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ಮೃತಪಟ್ಟಿದ್ದಾನೆ ಎಂದು ಹೇಳಿ ಅವರ ಕುಟುಂಬದವರಿಗೆ ಬೇರೆ ಮೃತದೇಹ ನೀಡಿ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿದ ಘಟನೆ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ನಡೆದಿದೆ.
ಮೋಳೆ ಗ್ರಾಮದ ಪಾಯಪ್ಪ ಸತ್ಯಪ್ಪ ಹಳ್ಳೋಳ್ಳಿ (82) ಈ ವೃದ್ಧ ಕೆಲ ಹೊತ್ತಿನ ನಂತರ ಮನೆಯವರಿಗೆ ಕರೆ ಮಾಡಿ ಇನ್ನೂ ಏಕೆ ಊಟ ತಂದು ಕೊಟ್ಟಿಲ್ಲ ಎಂದು ಕೇಳಿದಾಗ ಆಸ್ಪತ್ರೆ ಸಿಬ್ಬಂದಿ ಮಾಡಿರುವ ಎಡವಟ್ಟು ಬೆಳಕಿಗೆ ಬಂದಿದೆ.
ಸೋಮವಾರ ಬೆಳಗ್ಗೆ ಮೋಳೆ ಗ್ರಾಮಕ್ಕೆ ಆಗಮಿಸಿದ ಬೆಳಗಾವಿ ಖಾಸಗಿ ಆಸ್ಪತ್ರೆ ಸಿಬ್ಬಂದಿ, ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಹಾಗೂ ಕಾಗವಾಡ ಪಿಐ ಹಣಮಂತ ಧರ್ಮಟ್ಟಿ, ಉಪತಹಶೀಲ್ದಾರ ಅಣ್ಣಪ್ಪ ಕೋರೆ ಅವರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ಮಾಡಿದ್ದ ಮೃತದೇಹವನ್ನು ಹೊರ ತೆಗೆಯಲಾಗಿದೆ. ಗೋಕಾಕ ತಾಲೂಕಿನ ಗ್ರಾಮವೊಂದರ ಕುಟುಂಬದವರಿಗೆ ಸೇರಿದ ವ್ಯಕ್ತಿಯ ಈ ಮೃತದೇಹವನ್ನಹ ಹಸ್ತಾಂತರಿಸಲಾಯಿತು.

ಘಟನೆ ಹಿನ್ನೆಲೆ ಏನು?: ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ವೃದ್ಧ ಪಾಯಪ್ಪ ಚಿಕಿತ್ಸೆ ಪಡೆಯುತ್ತಿದ್ದನು. ಮೇ 1 ರಂದು ಈ ವೃದ್ಧ ಮೃತಪಟ್ಟಿರುವುದಾಗಿ ಹೇಳಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಆಗ ಕುಟುಂಬದ ನಾಲ್ವರು ಪಿಪಿಇ ಕಿಟ್ ಧರಿಸಿ ಮೃತದೇಹವನ್ನು ತಂದು ಪ್ಯಾಕ್ ಓಪನ್ ಮಾಡದೇ ತಮ್ಮ ಹೊಲದಲ್ಲಿ ಕೋವಿಡ್ ನಿಯಮವಾಳಿ ಪ್ರಕಾರ ಅಂತ್ಯಸಂಸ್ಕಾರ ನಡೆಸಿದ್ದಾರೆ. ಮೃತದೇಹದ ಮುಖ ನೋಡದೆ ವಿಧಿವಿಧಾನ ನಡೆಸಿದ್ದಾರೆ. ನಂತರ ಒಂದು ತಾಸಿನ ಬಳಿಕ ಆಸ್ಪತ್ರೆಯ ನರ್ಸ್ ಮೊಬೈಲ್ ಪಡೆದು ವೃದ್ಧ ಪಾಯಪ್ಪ ಮನೆಯವರಿಗೆ ಕರೆ ಮಾಡಿ, ನನಗೆ ಊಟ ಏಕೆ ತಂದು ಕೊಟ್ಟಿಲ್ಲ ಎಂದು ಕೇಳಿದಾಗ ಮನೆಯವರು ಹೌಹಾರಿದ್ದಾರೆ. ದಿಗ್ಭ್ರಮೆಗೊಂಡು ಆಸ್ಪತ್ರೆಯವರನ್ನು ವಿಚಾರಿಸಿದಾಗ ಎಡವಟ್ಟು ಮಾಡಿರುವುದು ಬೆಳಕಿಗೆ ಬಂದಿದೆ.
Laxmi News 24×7