ಗೋಕಾಕ ತಾಲೂಕು ಆಸ್ಪತ್ರೆ ಬಳಿ ರಮೇಶ ಜಾರಕಿಹೊಳಿ ಅಭಿಮಾನಿಗಳು ಹಾಗೂ ವಕೀಲರ ನಡುವೆ ನಿನ್ನೆ ನಡೆದ ಘರ್ಷಣೆಗೆ ಸಂಬಂಧಿಸಿ ಜಾರಕಿಹೊಳಿ ಪರವಾಗಿ ನೀಡಿದ ದೂರನ್ನು ಪೊಲೀಸರು ದಾಖಲಿಸಿಕೊಂಡು ನ್ಯಾಯವಾದಿ ಚೆನ್ನಬಸು ಗಿಡ್ನವರ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.
ಗೋಕಾಕ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಐಸಿಯುನಲ್ಲಿ ದಾಖಲಾಗಿದ್ದಾರೆ ಎನ್ನಲಾದ ರಮೇಶ ಜಾರಕಿಹೊಳಿ ಅವರನ್ನು ಕಾಣಲು ನ್ಯಾಯವಾದಿ ಚೆನ್ನಬಸವ ಚಂದನ ಗಿಡ್ಡನವರ ಮತ್ತು ಸಂಗಡಿಗರು ತಾಲೂಕು ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ರಮೇಶ ಜಾರಕಿಹೊಳಿ ಅಭಿಮಾನಿಗಳು ಮತ್ತು ನ್ಯಾಯವಾದಿಗಳ ನಡುವೆ ವಾಗ್ವಾದ ನಡೆದು
ಘರ್ಷಣೆಗೆ ಕಾರಣವಾಗಿತ್ತು. ಈ ವೇಳೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಮೇಶ ಜಾರಕಿಹೊಳಿ ಅಭಿಮಾನಿಗಳ ಬಳಗದ ಗೋಕಾಕ ಫಾಲ್ಸ್‍ನ ಹನುಮಂತ ರೇವಪ್ಪ ಸೊಂಡಿ ಎಂಬುವವರು ನೀಡಿದ್ದ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದರು.
ಈ ಸಂಬಂಧ ಹಲ್ಲೆ ನಡೆಸಿ ಥಳಿಸಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪ್ರಕಾಶ ಭಾಗೋಜಿ, ಚೆನ್ನಬಸು ಗಿಡ್ಡನವರ, ಸಂತೋಷ ಪೂಜೇರಿ ಎಂಬುವವರನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.