Breaking News

ಸುಧಾಕರ್‌ ರಾಜೀನಾಮೆಗೆ ವಿರೋಧ ಪಕ್ಷಗಳ ಆಗ್ರಹ: ಕಲಾಪ ಅನಿರ್ಧಿಷ್ಟ ಕಾಲ ಮುಂದೂಡಿಕೆ

Spread the love

ಬೆಂಗಳೂರು: ರಾಜ್ಯದ 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆಯಾಗಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ನೀಡಿರುವ ಹೇಳಿಕೆಯನ್ನು ವಿರೋಧಿಸಿ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಚಿವ ಸುಧಾಕರ್ ಅವರ ರಾಜೀನಾಮೆಗೆ ಒತ್ತಾಯಿಸಿದರು.

ಭೋಜನ ವಿರಾಮದ ಬಳಿಕ ಕಲಾಪ ಸೇರಿದಾಗ ಸುಧಾಕರ್‌ ಹೇಳಿಕೆಯನ್ನು ವಿಪಕ್ಷ ಸದಸ್ಯರು ಕಟುವಾಗಿ ಟೀಕಿಸಿದರು. ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಸಿದ್ದರಾಮಯ್ಯ ಮಾತನಾಡಿ, ‘ಸುಧಾಕರ್‌ ಅವರು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ. ನನ್ನ, ಕೆ.ಆರ್‌.ರಮೇಶ್‌ಕುಮಾರ್‌, ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್‌ ಅವರ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ. 224 ಶಾಸಕರು ಸತ್ಯ ಹರಿಶ್ಚಂದ್ರರಲ್ಲ ಎಂದಿದ್ದಾರೆ. ಇದು ಹಕ್ಕುಚ್ಯುತಿಯಾಗುತ್ತದೆ. ಎಲ್ಲಾ ಶಾಸಕರ ಬಗ್ಗೆಯೂ ತನಿಖೆ ಮಾಡಿಸಿ’ ಎಂದು ಗುಡುಗಿದರು.

‘ಮುಖ್ಯಮಂತ್ರಿ ಸೇರಿ ಎಲ್ಲ ಶಾಸಕರ ಬಗ್ಗೆಯೂ ತನಿಖೆ ನಡೆಯಲಿ. ಈ ರೀತಿ ಹೇಳಿಕೆ ನೀಡಿದ ಸುಧಾಕರ್‌ ಅವರು ರಾಜೀನಾಮೆ ನೀಡಬೇಕು. ಇವರ ಪ್ರಕಾರ 224 ಶಾಸಕರೂ ವ್ಯಭಿಚಾರಿಗಳಾ? ಮಂತ್ರಿಗಳನ್ನು ನೀವೇಕೆ ಸಮರ್ಥಿಸಿಕೊಳ್ಳುತ್ತೀರಿ’ ಎಂದು ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ ವಿರುದ್ಧ ಗರಂ ಆದ ಸಿದ್ದರಾಮಯ್ಯ, ‘ಇದು ವ್ಯಭಿಚಾರಿಗಳ ಸರ್ಕಾರ’ ಎಂದು ಕಿಡಿಕಾರಿದರು.

ಕಾಂಗ್ರೆಸ್‌ನ ಆರ್.ವಿ.ದೇಶಪಾಂಡೆ ಮಾತನಾಡಿ, ‘ನಾನು 32 ಕ್ಕೂ ಹೆಚ್ಚು ವರ್ಷಗಳಿಂದ ಸದನದಲ್ಲಿದ್ದೇನೆ. ಹಿಂದೆಂದೂ ಯಾರೂ ಈ ರೀತಿ ಮಾತನಾಡಿರಲಿಲ್ಲ. ಇದರಿಂದ ನನಗೆ ನೋವಾಗಿದೆ. ಎಲ್ಲರ ಬಗ್ಗೆಯೂ ತನಿಖೆ ಆಗಲಿ. ಈ ಸದನದಲ್ಲಿ ಮಹಿಳೆಯರೂ ಇದ್ದಾರೆ. ಸಚಿವರು ಇಂತಹ ಮಾತುಗಳನ್ನು ಆಡಿದ್ದು ಸರಿಯಲ್ಲ’ ಎಂದರು.

ಸಚಿವ ಸುಧಾಕರ್‌ ಅವರು ಸದಸ್ಯರ ಕ್ಷಮೆಯನ್ನು ಕೇಳಬೇಕು ಎಂದು ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ್‌ ಆಗ್ರಹಿಸಿದರು.

ಸಚಿವ ಸುಧಾಕರ್ ಅವರನ್ನು ಸಮರ್ಥಿಸಿ ಮಾತನಾಡಿದ ಬೊಮ್ಮಾಯಿ, ‘ಸಚಿವರು ಸದನದಿಂದ ಹೊರಗೆ ಮಾಧ್ಯಮದ ಬಳಿ ಮಾತನಾಡಿದ್ದಾರೆ. ಅವರು ಯಾವ ಅರ್ಥದಲ್ಲಿ ಏನು ಮತ್ತು ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ ಎಂಬುದನ್ನು ಪರಿಶೀಲಿಸಬೇಕು. ಸದನದಲ್ಲಿ ಸಚಿವರ ಚಾರಿತ್ರ್ಯಕ್ಕೆ ಧಕ್ಕೆ ಬರುವಂತೆ ನೀವು ಮಾತನಾಡಲಿಲ್ಲವೇ’ ಎಂದು ಪ್ರಶ್ನಿಸಿದರು.

ಗದ್ದಲ ಜೋರಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಯಾರೂ ಭಾವಾವೇಶಕ್ಕೆ ಒಳಗಾಗಿ ಸದಸ್ಯರ ಬಗ್ಗೆ, ಸದನದ ಗೌರವಕ್ಕೆ ಧಕ್ಕೆ ತರುವ ಹಾಗೆ ಮಾತನಾಡಬಾರದು. ಎಲ್ಲರೂ ಸದನಕ್ಕೆ ಮತ್ತು ಸದಸ್ಯರಿಗೆ ಗೌರವ ತರುವ ರೀತಿಯಲ್ಲೇ ಮಾತನಾಡಬೇಕು. ನಿಮ್ಮೆಲ್ಲರಿಗೂ ಆದ ನೋವು ನನಗೂ ಆಗಿದೆ’ ಎಂದು ಸಮಾಧಾನಪಡಿಸುವ ಮಾತು ಆಡಿದರು.

ಕಲಾಪ ಅನಿರ್ಧಿಷ್ಟ ಮುಂದಕ್ಕೆ

ವಿಧಾನಸಭೆ ಕಲಾಪವನ್ನು ಸಭಾಧ್ಯಕ್ಷ ಕಾಗೇರಿ ಅನಿರ್ಧಿಷ್ಟ ಕಾಲ ಮುಂದೂಡಿದರು. ‘ಬಜೆಟ್‌ ಅಧಿವೇಶನ ಒಟ್ಟು 13 ದಿನಗಳು ನಡೆದಿದ್ದು, 44 ಗಂಟೆ 30 ನಿಮಿಷ ಕಲಾಪ ನಡೆದಿದೆ. 11 ಮಸೂದೆಗಳ ಪೈಕಿ 9 ಮಸೂದೆಗಳು ಅಂಗೀಕಾರ ಪಡೆದಿವೆ’ ಎಂದು ಕಾಗೇರಿ ತಿಳಿಸಿದರು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ