ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಖಂಜರ್ ಗಲ್ಲಿಯಲ್ಲಿ ದ್ವಿಚಕ್ರವಾಹನಗಳ ಪಾರ್ಕಿಂಗ್ ಝೋನ್ ನಿರ್ಮಿಸಿ ಬರೊಬ್ಬರಿ ಮೂರು ವರ್ಷ ಕಳೆದಿದ್ದು ಈ ಪಾರ್ಕಿಂಗ್ ಝೋನ್ ಈಗ ತಾನಾಗಿಯೇ ಮಟಕಾ ಬುಕ್ಕಿಗಳ ಅಡ್ಡಾ ಆಗಿ ಪರಿವರ್ತನೆಯಾಗಿದೆ.
ಬೆಳಗಾವಿಯ ಖಡೇ ಬಝಾರ್,ಗಣಪತಿ ಗಲ್ಲಿ,ಮತ್ತು ಕಚೇರಿ ರಸ್ತೆಯಲ್ಲಿ ಟು ವ್ಹೀಲರ್ ಗಳ ಪಾರ್ಕಿಂಗ್ ನಿಷೇಧಿಸಿ ಇಲ್ಲಿಯ ಪಾರ್ಕಿಂಗ್ ಗೆ ಖಂಜರ್ ಗಲ್ಲಿಯಲ್ಲಿ ಪಾಲಿಕೆಯ ಜಾಗೆಯಲ್ಲಿ ಪಾರ್ಕಿಂಗ್ ಝೋನ್ ನಿರ್ಮಿಸಿತ್ತು
ಈ ಪಾರ್ಕಿಂಗ್ ಝೋನ್ ಸಿದ್ಧವಾಗಿ ಮೂರು ವರ್ಷ ಕಳೆದಿವೆ ಆದರೂ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳ,ನಿರ್ಲಕ್ಷ್ಯ, ಸ್ಥಳೀಯ ಜನಪ್ರತಿನಿಧಿಗಳ ಬೇಜವಾಬ್ದಾರಿ, ಮತ್ತು ಜಿಲ್ಲಾಡಳಿತದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಪಾರ್ಕಿಂಗ್ ಝೋನ್ ಈಗ ಮಟಕಾ ಬುಕ್ಕಿಗಳ ಪಾಲಾಗಿರುವದು ,ಬೆಳಗಾವಿಯ ದುರಂತವೋ..? ದುರ್ದೈವವೋ ತಿಳಿಯುತ್ತಿಲ್ಲ.
ಸಂಜೆಯಾದ್ರೆ ಸಾಕು ಮಟಕಾ ಬುಕ್ಕಿಗಳ ಓಪನ್ ,ಕ್ಲೋಸ್ ಶುರುವಾಗುತ್ತದೆ ,ಜೊತೆಗೆ ಗಾಂಜಾ ಘಾಟು ಇಲ್ಲಿಯ ವಿಹಾರಿಗಳ ಮೂಗು ಮುಚ್ಚುತ್ತಿದೆ.
ಬೆಳಗಾವಿಯಲ್ಲಿ ಪಾರ್ಕಿಂಗ್ ಸಮಸ್ಯೆ ವಿಪರೀತವಾಗಿದೆ , ವಾಹನಗಳ ಪಾರ್ಕಿಂಗ್ ಮಾಡಲು ಬೆಳಗಾವಿಯಲ್ಲಿ ಜಾಗವೇ ಇಲ್ಲ .ಬಾಪಟಗಲ್ಲಿಯ ಮಲ್ಟಿ ಲೇವಲ್ ಪಾರ್ಕಿಂಗ್ ನಿರ್ಮಾಣದ 4 ಕೋಟಿ ರೂ ಹಣ ಅಮೃತ ಯೋಜನೆಗೆ ಹರಿದು ಹೋಯಿತು,ಸ್ಮಾರ್ಟ್ ಸಿಟಿ ಯೋಜನೆಯಲ್ಲೂ ಪಾರ್ಕಿಂಗ್ ಝೋನ್ ಗಳ ನಿರ್ಮಾಣಕ್ಕೆ ಆದ್ಯತೆ ನೀಡಿಲ್ಲ ಹೀಗಾಗಿ ಬೈಕ್ ಮತ್ತು ಕಾರ್ ಮಾಲೀಕರು ನೋ ಪಾರ್ಕಿಂಗ್ ಜಾಗೆಗಳಲ್ಲಿ ತಮ್ಮ ವಾಹನಗಳನ್ನು ಪಾರ್ಕ ಮಾಡಿ ದಂಡ ಪಾವತಿಸುವದು ಬೆಳಗಾವಿಯಲ್ಲಿ ಸಾಮಾನ್ಯವಾಗಿದೆ.
ಪಾಲಿಕೆಯ ಆಡಳಿತಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಕೂಡಲೇ ಸಭೆ ಕರೆದು ಖಂಜರ್ ಗಲ್ಲಿಯ ಪಾರ್ಕಿಂಗ್ ಝೋನ್ ಉದ್ಘಾಟನೆಗೆ ಕ್ರಮ ಕೈಗೊಳ್ಳುವದು ಅಗತ್ಯವಾಗಿದೆ .