ತಿಪಟೂರು: ತರುಣ್ ಸುಧೀರ್ ನಿರ್ದೇಶನದ ನಟ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ರಾಜ್ಯದಾದ್ಯಂತ ಗುರುವಾರ ತೆರೆಕಂಡಿದ್ದು, ನಗರದ ತ್ರಿಮೂರ್ತಿ ಚಿತ್ರಮಂದಿರದ ಬಳಿ ಸಿನಿಮಾ ಪ್ರದರ್ಶನಕ್ಕೂ ಮೊದಲು ದರ್ಶನ್ ಭಾವಚಿತ್ರಕ್ಕೆ ಅಭಿಮಾನಿಗಳು ಮದ್ಯದ (ಬಿಯರ್) ಅಭಿಷೇಕ ಮಾಡುವ ಮೂಲಕ ಮುಜುಗರಕ್ಕೆ ಸಿಲುಕಿದ ಘಟನೆ ನಡೆದಿದೆ.
ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆ ದಿನದಂದು ಭಾವಚಿತ್ರ, ಕಟೌಟ್‌ಗಳಿಗೆ ಅಭಿಮಾನಿಗಳು ಹಾಲು ಹಾಗೂ ಹೂವಿನ ಅಭಿಷೇಕ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಕೆಲವು ಅಭಿಮಾನಿಗಳು ಚಿತ್ರಕ್ಕೆ ಶುಭಾಶಯ ಕೋರುವ ಬ್ಯಾನರ್‌ನಲ್ಲಿದ್ದ ದರ್ಶನ್ ಭಾವಚಿತ್ರಕ್ಕೆ ಮದ್ಯದ ಅಭಿಷೇಕ ಮಾಡಿದರು. ಬಳಿಕ ತಾವು ಕುಡಿದು ಸಂಭ್ರಮಿಸಿದರು. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾಶಿವರಾತ್ರಿ ಹಬ್ಬದಂದು ‘ರಾಬರ್ಟ್’ ಬಿಡುಗಡೆಯ ದಿನಾಂಕ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದಲೇ ಅಭಿಮಾನಿಗಳು ಚಿತ್ರಮಂದಿರದ ಮುಂಭಾಗ ಬ್ಯಾನರ್, ಕಟೌಟ್‌ಗಳನ್ನು ಕಟ್ಟಿದ್ದರು. ಟಿಕೆಟ್‍ಗಾಗಿ ಹಗಲು-ರಾತ್ರಿ ಕಾದು ಕುಳಿತಿದ್ದರು. ಬೆಳಿಗ್ಗೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳ ಗುಂಪಿನಲ್ಲಿ ಕೆಲವರು ಬಿಯರ್ ಬಾಟಲ್‌ಗಳನ್ನು ಹೊರತೆಗೆದು ದರ್ಶನ್ ಪರವಾಗಿ ಘೋಷಣೆ ಕೂಗಿದರು. ಬಳಿಕ ಮದ್ಯದ ಅಭಿಷೇಕ ಮಾಡಿದರು.
ಸಿನಿಮಾ ಪ್ರದರ್ಶನಕ್ಕೂ ಮೊದಲು ಪ್ರೇಕ್ಷಕರಿಗೆ ‘ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ’ ಎಂಬ ಜಾಹೀರಾತು ಪ್ರದರ್ಶಿಸಿ ಜಾಗೃತಿ ಮೂಡಿಸಲಾಗುತ್ತದೆ. ಆದರೆ, ಅಭಿಮಾನಿಗಳ ಈ ನಡೆಗೆ ಸಿನಿಮಾ ನೋಡಲು ಬಂದಿದ್ದ ಕೆಲವು ಸಹೃದಯ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.
Laxmi News 24×7