ಬೆಂಗಳೂರು: ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ವೀಡಿಯೊ ಪ್ರಕರಣದ ಕುರಿತು ವಿಸ್ತೃತ ತನಿಖೆ ನಡೆಸಲು ರಾಜ್ಯ ಸರಕಾರವು ಐಜಿಪಿ ಸೌಮೇಂದು ಮುಖರ್ಜಿ (ಪ್ರಸ್ತುತ ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು) ನೇತೃತ್ವದ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ.
ಗೃಹ ಹಾಗೂ ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ ಬುಧವಾರ ಬೆಳಗ್ಗಿನಿಂದಲೇ ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾ.9ರಂದು ರಮೇಶ್ ಜಾರಕಿಹೊಳಿ ನನಗೆ ಪತ್ರ ಬರೆದಿದ್ದು, ಮಾ.2ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನೀಡಲಾಗಿರುವ ದೂರಿನ ಬಗ್ಗೆ ಉಲ್ಲೇಖೀಸಿದ್ದರು. ಈ ದೂರಿನಲ್ಲಿ ತಮ್ಮ ವಿರುದ್ಧ ರಾಜಕೀಯ ತೇಜೋವಧೆ ಮತ್ತು ಮಾನಹಾನಿ ಮಾಡುವ ಉದ್ದೇಶವಿದ್ದು, ಇದರಲ್ಲಿ ಹಲವಾರು ಜನ ಸೇರಿ ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿರುತ್ತದೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ರಚಿಸಲಾಗಿದೆ ಎಂದು ಹೇಳಿದರು.
ಶಾಸಕರಿಂದಲೂ ಆಗ್ರಹ
ಸಿಡಿ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಹಲವು ಶಾಸಕರು ಆಗ್ರಹಿಸಿದ್ದಾರೆ. ಕೆಲವರು ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಜಾರಕಿಹೊಳಿ ವಿರುದ್ಧ ದೂರು ನೀಡಿದ್ದ ವ್ಯಕ್ತಿ ವಾಪಸ್ ಪಡೆದಿರುವ ಬಗ್ಗೆ ಸರಕಾರದಿಂದ ಯಾವುದೇ ನಿಲುವು ಪ್ರಕಟಿಸುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.
Laxmi News 24×7