Breaking News

ಪೌರಕಾರ್ಮಿಕ ಆತ್ಮಹತ್ಯೆ: ₹10 ಲಕ್ಷ ಪರಿಹಾರ ನೀಡಲು ಆಗ್ರಹ

Spread the love

ಬೆಂಗಳೂರು: ಮಲ ಸ್ವಚ್ಛಗೊಳಿಸಲು ಪುರಸಭೆ ಅಧಿಕಾರಿಗಳು ನೀಡಿದ ಒತ್ತಡದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮದ್ದೂರಿನ ಪೌರಕಾರ್ಮಿಕ ನಾರಾಯಣ ಅವರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಹಾಗೂ ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಸದಸ್ಯರು ವಿಶ್ವೇಶ್ವರಯ್ಯ ಟವರ್‌ ಬಳಿಯ ಪೌರಾಡಳಿತ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಇತ್ತೀಚೆಗಷ್ಟೇ ಮದ್ದೂರಿನ ಪೌರಕಾರ್ಮಿಕ ನಾರಾಯಣ (40) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಪುರಸಭೆ ಅಧಿಕಾರಿಗಳು ಬಲವಂತವಾಗಿ ಮಲಸ್ವಚ್ಛಗೊಳಿಸಲು ಒತ್ತಡ ಹೇರಿದ್ದರು. ನನ್ನ ಸಾವಿಗೆ ಅಧಿಕಾರಿಗಳೇ ಕಾರಣ’ ಎಂದು ಬರೆದಿದ್ದ ಡೆತ್‌ನೋಟ್ ಪತ್ತೆಯಾಗಿತ್ತು. ಆದರೆ, “ನಾರಾಯಣ ಆತ್ಮಹತ್ಯೆಗೂ ತಮಗೂ ಸಂಬಂಧವಿಲ್ಲ’ ಎಂದು ಅಧಿಕಾರಿಗಳು ಆರೋಪ ತಳ್ಳಿಹಾಕಿದ್ದರು.

‘ರಾಜ್ಯದಲ್ಲಿ ಮಲ ಹೊರುವ ಪದ್ಧತಿ ಇನ್ನೂ ಜೀವಂತವಾಗಿದೆ. ಅದಕ್ಕೆ ನಾರಾಯಣ ಅವರ ಆತ್ಮಹತ್ಯೆಯೇ ನಿದರ್ಶನ. ಮೇಲಧಿಕಾರಿಗಳ ಒತ್ತಡದಿಂದ ಮಲ ಸ್ವಚ್ಛ ಮಾಡುವ ಸ್ಥಿತಿ ಇದೆ. ಈ ನೀಚ ಪದ್ಧತಿಗೆ ಮತ್ತೊಂದು ಜೀವ ಬಲಿಯಾಗಿದೆ’ ಎಂದು ಆಲ್‌ ಇಂಡಿಯಾ ಸೆಂಟ್ರಲ್‌ ಕೌನ್ಸಿಲ್‌ ಆಫ್‌ ಟ್ರೇಡ್‌ ಯೂನಿಯನ್‌ (ಎಐಸಿಸಿಟಿಯು) ರಾಜ್ಯ ಸಮಿತಿ ಸದಸ್ಯೆ ಮೈತ್ರಿ ಕೃಷ್ಣನ್ ಬೇಸರ ವ್ಯಕ್ತಪಡಿಸಿದರು.

‘ನಾರಾಯಣ ಅವರನ್ನು ಮಲ ಹೊರುವ ಪದ್ಧತಿಯ ಸಂತ್ರಸ್ತ ಎಂದು ಪರಿಗಣಿಸಬೇಕು. ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು. ಈ ಘಟನೆಗೆ ಕಾರಣಕರ್ತರಾದ ಮದ್ದೂರು ಪುರಸಭೆಯ ಅಧಿಕಾರಿಗಳನ್ನು ವಜಾಗೊಳಿಸಬೇಕು. ಈ ಪ್ರಕರಣ ಸಮಗ್ರ ತನಿಖೆ ನಡೆಸಬೇಕು’ ಎಂದೂ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ, ದಲಿತ ಸಂಘರ್ಷ ಸಮಿತಿ (ಭೀಮವಾದ), ಕಾರ್ಮಿಕ ಹಾಗೂ ಮಹಿಳಾ ಸಂಘಟನೆಗಳು ಭಾಗವಹಿಸಿದ್ದವು.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ 2025-26

Spread the love ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ 2025-26 ಮೊಬೈಲ್ ಗೀಳಿನಿಂದ ಹೊರ ಬಂದು ಕ್ರೀಡೆ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ; …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ