ಬೆಂಗಳೂರು, ಫೆ.8- ರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳೆಂಬ ಬೇಧವಿಲ್ಲದೆ ಸಾರ್ವತ್ರಿಕವಾಗಿ ಅಂಬ್ಯುಲೆನ್ಸ್ ಸೇವೆ ಒದಗಿಸುತ್ತಾ ಬಂದಿರುವ ನಮ್ಮ ರಾಜ್ಯದವರನ್ನು ಕಡೆಗಣಿಸಿ ಕಮಿಷನ್ ಆಸೆಗಾಗಿ ಅನ್ಯ ರಾಜ್ಯದ ಆಂಬ್ಯುಲೆನ್ಸ್‍ಗಳಿಗೆ ಆದ್ಯತೆ ನೀಡುತ್ತಿರುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳ ಮುಖಂಡರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಶಿವರಾಮೇಗೌಡ ಮುಂತಾದವರು ಪ್ರತಿಭಟನೆ ನಡೆಸಿ ಅನ್ಯ ರಾಜ್ಯಗಳ ಅಂಬ್ಯುಲೆನ್ಸ್‍ಗೆ ಆದ್ಯತೆ ನೀಡಿ ರಾಜ್ಯದ ಆ್ಯಂಬುಲೆನ್ಸ್‍ಗಳನ್ನು ಕಡೆಗಣಿಸುತ್ತಿರುವ ಧೋರಣೆಯನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಕೋವಿಡ್‍ನಂತಹ ಸಂಕಷ್ಟದ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಸರ್ಕಾರದೊಂದಿಗೆ ಕೈ ಜೋಡಿಸಿ ಪ್ರಾಮಾಣಿಕವಾಗಿ ಆ್ಯಂಬ್ಯುಲೆನ್ಸ್‍ನವರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.ಆದರೆ ಸ್ಟನ್ ಪ್ಲಸ್ ರೆಡ್ ಅಂಬ್ಯುಲೆನ್ಸ್ ಎಂಬ ಕಂಪನಿಯವರು ಈಗ ಸಾವಿರಾರು ಅಂಬ್ಯುಲೆನ್ಸ್‍ಗಳನ್ನು ರಾಜ್ಯದಲ್ಲಿ ಓಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರಿಂದ ನಮ್ಮ ರಾಜ್ಯದ ಕನ್ನಡಿಗರ ಆ್ಯಂಬ್ಯುಲೆನ್ಸ್‍ನವರ ಬದುಕು ಬರ್ಬಾದಾಗುತ್ತದೆ. 15 ದಿನಗಳ ಕಾಲ ಗಡುವು ನೀಡುತ್ತೇವೆ. ಅಷ್ಟರೊಳಗೆ ಬೇರೆ ರಾಜ್ಯದ ಆ್ಯಂಬ್ಯುಲೆನ್ಸ್‍ಗಳ ಸೇವೆ ತೆರವಾಗಬೇಕು. ಇಲ್ಲದಿದ್ದರೆ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
