ವಿಜಯಪುರ (ಜ. 05): ಬಸನಗೌಡ ಪಾಟೀಲ ಯತ್ನಾಳ ಎಂದೂ ಸ್ವಾರ್ಥದ ಬಗ್ಗೆ ಮಾತನಾಡಿದವರಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಎಷ್ಟೋ ಸಂದರ್ಭದಲ್ಲಿ ದೆಹಲಿ ನಾಯಕರ ಬಗ್ಗೆಯೂ ನೇರವಾಗಿ ಮಾತನಾಡಿರುವ ಉದಾಹರಣೆಗಳಿವೆ. ಹಿಂದೆ ವಾಜಪೇಯಿ ಪ್ರಧಾನಿಯಾಗಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆಯ ಬಗ್ಗೆ ಧ್ವನಿ ಎತ್ತಿದ್ದರು. ಉತ್ತರ ಕರ್ನಾಟಕದ ಜನರೆಂದರೆ ಲಿಂಗಾಯಿತ ಶಾಸಕರಿಗೆ ರಾಜ್ಯ ಮಟ್ಟದ ಯಾರೂ ಗಾಡ್ ಫಾದರ್ ಗಳಿಲ್ಲ. ಹೀಗಾಗಿ ಒಬ್ಬೊಬ್ಬ ನಾಯಕರನ್ನು ಬೆನ್ನು ಹತ್ತಿಕೊಂಡು ಹೋಗಿದ್ದಾರೆ. ಆದರೆ, ಯತ್ನಾಳ ಗೌಡರು ಒಂಟಿ ಸಲಗವಿದ್ದಂತೆ. ಅವರು ಹೇಳಿದ್ದೆ ಒಂದು ದಾರಿ. ಆನೆ ನಡೆದಿದ್ದೆ ಒಂದು ದಾರಿ ಎಂಬಂತಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಪರ ಮಾತನಾಡಿದ್ದಾರೆ.
ಯತ್ನಾಳ್ ವಿರುದ್ಧ ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆ ಕುರಿತು ಮಾತನಾಡಿದ ಅವರು, ಬಿಜೆಪಿ ಶಾಸಕಾಂಗ ಸಭೆಯಲ್ಲಿ ಯತ್ನಾಳ ಉತ್ತರ ಕರ್ನಾಟಕಕ್ಕೆ ಸಮ ಪ್ರಮಾಣದಲ್ಲಿ ಅನುದಾನ ಹಂಚಿಕೆ ಆಗದಿದ್ದಾಗ ಮಾತನಾಡಿದ್ದಾರೆ. ಯತ್ನಾಳ ಮಾತು ಸರಿಯಿದೆ. ಆದರೆ, ವಿನಾಕಾರಣ ತಪ್ಪಾಗಿ ಅರ್ಥ ಮಾಡಿಕೊಂಡು, ಯಡಿಯೂರಪ್ಪ ಸಾಹೇಬರು ಗರಂ ಆದರಂತೆ. ಯತ್ನಾಳ ಮತ್ತು ಯಡಿಯೂರಪ್ಪ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಆದರೆ, ಆಡಳಿತಾತ್ಮಕ ಭಿನ್ನಾಭಿಪ್ರಾಯಗಳಿವೆ ಹೊರತು ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ ಎಂದರು.