ಮೈಸೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬೆಳಗಾವಿಯ ದಿಲೀಪ್ ಕುರಂದವಾಡೆ, ವಿಜಯಪುರದ ಪುರುಷೋತ್ತಮ ಮತ್ತು ಮೈಸೂರಿನ ಕೆ.ಪಿ.ನಾಗರಾಜ್ ಪಬ್ಲಿಕ್ ಟಿವಿಯ ವರದಿಗಾರರು ಆಯ್ಕೆಯಾಗಿದ್ದಾರೆ.
ಮೂವರು ವರದಿಗಾರರಿಗೆ ನಾಳೆ ನಡೆಯುವ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮೈಸೂರು ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಮಂದಿಗೆ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಬಾರಿ ಮಾಧ್ಯಮ ಕ್ಷೇತ್ರದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಮೈಸೂರು ಜಿಲ್ಲಾಡಳಿತ ಕೆ.ಪಿ.ನಾಗರಾಜ್ ಅವರನ್ನು ಆಯ್ಕೆ ಮಾಡಿದೆ. ಪಬ್ಲಿಕ್ ಟಿವಿಯ ಮೈಸೂರು ಜಿಲ್ಲೆಯ ವರದಿಗಾರರಾಗಿ ಕೆಪಿ ನಾಗರಾಜ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರಲ್ಲದೆ ಸಾಹಿತ್ಯ ಕ್ಷೇತ್ರದಿಂದ ಡಾ.ಗುಬ್ಬಿಗೂಡು ರಮೇಶ್, ಸಮಾಜ ಸೇವಾ ಕ್ಷೇತ್ರದಿಂದ ಕೆ.ಜೆ.ಶಂಕರ ನಾರಾಯಣ ಶಾಸ್ತ್ರಿ, ಜಾನಪದ ಕ್ಷೇತ್ರದಿಂದ ಭಾಗ್ಯಮ್ಮ ಅವರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ಸಂಗೀತ ಕ್ಷೇತ್ರದಿಂದ ರೇವಣ್ಣ, ಪರಿಸರ ಕ್ಷೇತ್ರದಿಂದ ನಾಗಭೂಷಣ್ ರಾವ್, ಕನ್ನಡ ಹೋರಾಟಗಾರ ವರ್ಗದಿಂದ ಸಿದ್ದರಾಜು, ಡಿ.ಆರ್.ಕರೀಗೌಡ, ಡಿ.ಎಂ.ಬಸವಣ್ಣ ಮತ್ತು ಡಾ.ಎಂ.ಬಿ.ಮಂಚೇಗೌಡ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲಾಡಳಿತ ಆಯ್ಕೆ ಮಾಡಿದೆ.
ನಾಳೆ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಇವರೆಲ್ಲರಿಗೂ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.