ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡುತ್ತಿದ್ದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಹದೇವಪುರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ, ಅಂಜಲಿ, ದೀಪಕ್, ಪ್ರೇಮನಾಥ್, ಟೈಸನ್, ವಿನೋದ್, ಪ್ರಕಾಶ್, ಈಶ್ವರಿ ಎಂಬುವವರನ್ನು ಬಂಧಿಸಿದ್ದಾರೆ. ಪೈ ಲೇಔಟ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಂಧಿತರು ಶ್ರೀಮಂತರನ್ನು ಟಾರ್ಗೇಟ್ ಮಾಡಿ, ಪೈ ಲೇಔಟ್ ಗೆ ಕರೆತರುತ್ತಿದರು. ಅಲ್ಲಿಗೆ ಬಂದ ಬಳಿಕ ವ್ಯಕ್ತಿ ಯುವತಿ ಜೊತೆ ಇದ್ದಾಗ ಯುವತಿಯ ಪತಿ ಹಾಗೂ ಸ್ನೇಹಿತರೆಂದು ದಾಳಿ ಮಾಡಿ ವಿಡಿಯೋ ಚಿತ್ರಣ ಮಾಡುತ್ತಿದ್ದರು.
ಹೀಗೆ ವಿಡಿಯೋ ಮಾಡಿದ ಬಳಿಕ ವ್ಯಕ್ತಿಗೆ ವಿಷಯ ಹೊರಗೆ ಗೊತ್ತಾದರೆ ವಿಡಿಯೋ ಬಿಡುಗಡೆ ಮಾಡುತ್ತೇವೆ ಹಾಗೂ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿ, ಹಣ, ಚಿನ್ನಾಭರಣಗಳನ್ನು ಕಿತ್ತುಕೊಳ್ಳುತ್ತಿದ್ದರು. ವ್ಯಕ್ತಿಯೊಬ್ಬ ನೀಡಿದ ದೂರಿನ ಮೇರೆಗೆ ಇದೀಗ ಮಹದೇವಪುರ ಪೊಲೀಸರು ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ನ್ನು ಬಂಧಿಸಿದ್ದಾರೆ.