ತುಮಕೂರು/ಶಿರಾ, ಅ.22- ಶಿರಾ ಉಪ ಚುನಾವಣೆ ಮುಗಿಯುವವರೆಗೂ ನಾನು ಇಲ್ಲೇ ಇದ್ದು ಹೋರಾಟ ಮಾಡುತ್ತೇನೆ. ಕೆ.ಆರ್.ಪೇಟೆ ಮಾದರಿಯಲ್ಲಿ ಏನಾದರೂ ಚುನಾವಣೆ ನಡೆಸಲು ಹೋದರೆ ನಾನು ರಸ್ತೆಗೆ ಇಳಿದು ಉಗ್ರ ಪ್ರತಿಭಟನೆ ನಡೆಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ಗುಡುಗಿದ್ದಾರೆ.ಏನಾದರೂ ನನ್ನ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆದರೆ ಸಿಡಿದೇಳುತ್ತೇನೆ. ಈ ಉಪ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸುತ್ತೆನೆ ಇಲ್ಲಿ ಹಣ ಬಲವೊ ಜನ ಬಲವೊ ನೋಡಿಯೇ ಬಿಡೋಣ ಎಂದು ಹೇಳಿದರು.
ತಾಲ್ಲೂಕಿನ ಚಂಗಾವರದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ದೇವೇಗೌಡರು, ಉಪಚುನಾವಣೆಯಲ್ಲಿ ಜೆಡಿಎಸ್ ನ್ನ ಮುಗಿಸುತ್ತೇವೆ. ನೆಲಕಚ್ಚಿಸುತ್ತೇವೆ. ಎಂಬ ಅಬ್ಬರದ ಮಾತನ್ನ ಕೇಳಿ ನಾನು ಒಂದು ತೀರ್ಮಾನಕ್ಕೆ ಬಂದಿದ್ದೇನೆ
ಈ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡಿದ್ದೇನೆ. ಈ ಚುನಾವಣೆ ಮುಗಿಯುವವರೆಗೆ ನಾನು ಮದುಗಿರಿಯಲ್ಲಿ ಶಾಸಕ ವೀರಭದ್ರಯ್ಯನವರ ಮನೆಯಲ್ಲೇ ಮೊಕ್ಕಾಂ ಹೂಡುತ್ತೇನೆ ಎಂದು ಗುಡುಗಿದರು. ಬಿಜೆಪಿ ಯುವ ಮುಖಂಡರು ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ನ್ನ ಮುಗಿಸಿದ ರೀತಿಯಲ್ಲಿ ಇಲ್ಲೂ ಮುಗಿಸುತ್ತೇವೆ ಎಂದಿದ್ದಾರೆ. ಇಲ್ಲಿ ನಿಮ್ಮ ಆಟ ನಡೆಯೋಲ್ಲಾ ಎಂದು ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ಹಾಗೂ ಅಶ್ವಥ್‍ನಾರಾಯಣ್ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಆದರೆ ಕೆ.ಆರ್.ಪೇಟೆನೇ ಬೇರೆ. ಅಲ್ಲಿನ ಜಿಲ್ಲಾಧಿಕಾರಿ, ಎಸ್ಪಿ, ಮೈಸೂರಿನ ಐಜಿ ಇವರೆಲ್ಲಾ ಸೇರಿ ಚುನಾವಣೆಯಲ್ಲಿ ಹೇಗೆ ನಡೆದುಕೊಂಡರು ಎಂದು ನನಗೆ ಗೊತ್ತಿದೆ. ಅವರೆ ಮುಂದೆ ನಿಂತು ಹಣ ಹಂಚುವ ಕೆಲಸ ಮಾಡಿದ್ರು ಎಂದು ಅಧಿಕಾರಿಗಳ ವಿರುದ್ದ ತಿವ್ರ ಆಕ್ರೋಶ ವ್ಯಕ್ತಪಡಿಸಿದರು. ಬರಲಿ ಯುದ್ದಕ್ಕೆ, ನಾನು ಸತ್ಯ ನುಡಿಯುತ್ತೇನೆ. ದಾಕ್ಷಿಣ್ಯ ಇಲ್ಲ. ನನ್ನ ಒಬ್ಬ ಕಾರ್ಯಕರ್ತನ ಮೇಲೆ ದೌರ್ಜನ್ಯ ಸಿಡಿದು ನಿಲ್ಲುತ್ತೇನೆ. ನನಗೆ ಒಂದು ಫೋನ್ ಮಾಡಿ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಮಾತನಾಡಿ, ಅಂದು ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕ್ಷಣದಿಂದ ಅಧಿಕಾರದಿಂದ ಹೊರಬರುವವರೆಗೂ ನಾನು ಅನುಭವಿಸಿದ ಸಂಕಷ್ಟ ಅಷ್ಟಿಷ್ಟಲ್ಲ. ಅಷ್ಟು ಹಿಂಸೆಯನ್ನು ಕಾಂಗ್ರೆಸ್ ಪಕ್ಷದವರು ನೀಡಿದರು. ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ ಎಂದರು.
ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಿದ ಕೀರ್ತಿ ನನಗಿದೆ ಸಾವಿರಾರು ಕೋಟಿ ಹಣವನ್ನು ಮನ್ನಾ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿ ಕೊಟ್ಟಿದ್ದೇನೆ ಅದರಲ್ಲಿ ಸಿರಾ ತಾಲೂಕಿನ ರೈತರಿಗೆ ಹೆಚ್ಚಿನ ಲಾಭವಾಗಿದೆ ಎಂದು ಹೇಳಿದರು. ಜೆಡಿಎಸ್ ಪಕ್ಷದಲ್ಲಿ ಕೆಲವುರು ಬೆಳೆಯುತ್ತಾರೆ ಅಧಿಕಾರಗಳನ್ನು ಅನುಭವಿಸುತ್ತಾರೆ ಕಡೆಗೆ ನಮಗೆ ಚೂರಿ ಹಾಕಿ ಬೇರೆ ಪಕ್ಷಗಳಿಗೆ ಹೋಗಿ ನಮ್ಮ ವಿರುದ್ಧವೇ ಕತ್ತಿ ಮಸೆಯುತ್ತಾರೆ ಅಂತವರಿಗೆ ನೀವೇ ಬುದ್ದಿ ಕಲಿಸಿ. ಜನರ ಶಕ್ತಿ ಇರುವವರೆಗೂ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಸೇರಿದಂತೆ ಹಲವರಿಗೆ ಎಚ್‍ಡಿಕೆ ತಿರುಗೇಟು ನೀಡಿದರು.
ದಿವಂಗತ ಸತ್ಯನಾರಾಯಣ ಅವರು ತಾಲೂಕಿನ ಜನರಿಗಾಗಿ ಹಗಲಿರುಳು ದುಡಿದಿದ್ದಾರೆ. ಅವರ ಸೇವೆ ಅಪಾರವಾಗಿದೆ. ಅಂತಹವರ ಪತ್ನಿ ಅಮ್ಮಾಜಮ್ಮ ಅವರಿಗೆ ಟಿಕೆಟ್ ನೀಡಲಾಗಿದೆ. ನೀವೆಲ್ಲರೂ ಅವರಿಗೆ ಬೆಂಬಲಿಸಿ ಸಹಕರಿಸಿ ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಿ ಎಂದು ಕುಮಾರಸ್ವಾಮಿ ಜನರಿಗೆ ಮನವಿ ಮಾಡಿಕೊಂಡರು.
ಎಚ್.ಡಿ.ರೇವಣ್ಣ, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್, ವೈಎಸ್‍ವಿ ದತ್ತ, ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷ ಆರ್.ಸಿ.ಅಂಜನಪ್ಪ, ಬೆಳ್ಳಿ ಲೋಕೇಶ್ ಸೇರಿದಂತೆ ಹಲವಾರು ಶಾಸಕರು, ಮಾಜಿ ಶಾಸಕರು, ಜಿಪಂ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.