ಕರ್ನಾಟಕ ಚಲನಚಿತ್ರ ಅಕಾಡೆಮಿ ಒಂದಕ್ಕೇ ಬರೋಬ್ಬರಿ 18 ಕೋಟಿ ರೂಪಾಯಿ ಅನುದಾನ ಕೇಳಿದ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್‌ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ತರಾಟೆ ತೆಗೆದುಕೊಂಡಿದ್ದಾರೆ.
ಸುನೀಲ್ ಪುರಾಣಿಕ್ ಸಿಎಂ ಬಳಿ ಒಂದು ವರ್ಷಕ್ಕೆ ₹18 ಕೋಟಿಯನ್ನ ಚಲನಚಿತ್ರ ಅಕಾಡೆಮಿಗೆ ಬಿಡುಗಡೆ ಮಾಡಿ ಎಂದು ಕೇಳಿದ್ದಾರಂತೆ.. 18 ಕೋಟಿ ರೂಪಾಯಿಗಳ ಮನವಿ ಪತ್ರ ತೆಗೆದುಕೊಂಡು ಸಿಎಂ ಬಳಿ ಹೋದ ಸುನೀಲ್ ಪುರಾಣಿಕ್ ಅದಕ್ಕೂ ಮುನ್ನ ಬಿಎಸ್ವೈ ಪುತ್ರ ಬಿ.ವೈ ವಿಜಯೇಂದ್ರರನ್ನು ಭೇಟಿ ಮಾಡಿದ್ದರಂತೆ.
ಮನವಿ ಪತ್ರ ನೋಡಿದ ಬಿ.ವೈ. ವಿಜಯೇಂದ್ರ ಸುನಿಲ್ ಪುರಾಣಿಕ್‌ಗೆ ಇಂತಹ ಮನವಿ ಯಾವುದೇ ಕಾರಣಕ್ಕೂ ಸಿಎಂ ಮುಂದೆ ತರಬೇಡಿ ಎಂದು ಹಿಗ್ಗಾಮುಗ್ಗಾ ಝಾಡಿಸಿದ್ದರು. ವಿಜಯೇಂದ್ರ ಮಾತು ಕೇಳಿ ಅಲ್ಲಿಂದ ವಾಪಸ್ಸಾದ ಸುನೀಲ್ ಪುರಾಣಿಕ್, ನಂತರ 12 ಕೋಟಿಯ ಮನವಿ ಪತ್ರ ಬರೆದುಕೊಂಡು ಬಂದರಂತೆ. ಅಷ್ಟೇ ಅಲ್ಲ ಈ 12 ಕೋಟಿ ರೂಪಾಯಿ ಬೇಡಿಕೆಯಲ್ಲಿ ಚಲನಚಿತ್ರೋತ್ಸವದ ವೆಚ್ಚ ಸೇರಿಲ್ಲ.. ಬರೀ ಅಕಾಡೆಮಿ ಖರ್ಚಿಗೆ 12 ಕೋಟಿ ರೂಪಾಯಿಗಳು ಎಂದು ಮನವಿ ಪತ್ರದಲ್ಲಿ ಪುರಾಣಿಕ್ ಸಬ್ ಕಂಡಿಷನ್ ಕೂಡ ಹಾಕಿದ್ದ ಪುರಾಣಿಕ್, ಚಲನ ಚಿತ್ರೋತ್ಸವಕ್ಕೆ ಪ್ರತ್ಯೇಕ ಅನುದಾನವನ್ನೂ ಪುರಾಣಿಕ್ ಕೇಳಿದ್ದರು.ಈ ಹಿಂದೆ ಅಕಾಡೆಮಿ ಅಧ್ಯಕ್ಷರಾಗಿದ್ದ ನಾಗಾಭರಣ, ತಾರಾ ಅನುರಾಧ, ಎಸ್.ವಿ.ರಾಜೇಂದ್ರ ಸಿಂಗ್(ಬಾಬು), ನಾಗತಿಹಳ್ಳಿ ಚಂದ್ರಶೇಖರ್ ಯಾರೂ ಇಷ್ಟು ದೊಡ್ಡ ಮೊತ್ತದ ಅನುದಾನ ಕೇಳಿರಲಿಲ್ಲ.. ನಾಗಾಭರಣ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಕೊಟ್ಟಿದ್ದು ವಾರ್ಷಿಕ ಕೇವಲ 38 ಲಕ್ಷ ರೂಪಾಯಿ ಅಷ್ಟೇ.. ತಾರಾ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಕೊಟ್ಟಿದ್ದು ಕೇವಲ ಒಂದೇ ಒಂದು ಕೋಟಿ ರೂಪಾಯಿ ಅಷ್ಟೇ.. ಅದರಲ್ಲೂ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನುರಾಧ 30 ಲಕ್ಷ ರೂಪಾಯಿ ಉಳಿಸಿ ಹೋಗಿದ್ದರು. ಈಗ ಒಂದು ವರ್ಷದಲ್ಲಿ 12 ಕೋಟಿ ಅನುದಾನದಲ್ಲಿ ಏನ್ಮಾಡ್ತಾರೆ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್? ಬರೀ ಚಲನಚಿತ್ರ ಅಕಾಡೆಮಿ ಒಂದಕ್ಕೇ ಕೇವಲ ಒಂದು ವರ್ಷಕ್ಕೆ 12 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಕ್ಕೆ ಸಿಎಂ ಯಡಿಯೂರಪ್ಪ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಒಂದೊಂದು ಅಕಾಡೆಮಿಗೆ 12 ಕೋಟಿ, 18 ಕೋಟಿ..? ಹೀಗೆ ಬೇಕಾಬಿಟ್ಟಿ ಬೇಡಿಕೆ ಕೇಳಿದರೆ ಸರ್ಕಾರ ನಡೆಸೋದು ಹೇಗೆ? ರಾಜ್ಯದ ಆರ್ಥಿಕ ಪರಿಸ್ಥಿತಿ ಅರ್ಥ ಮಾಡಿಕೊಂಡು ಬೇಡಿಕೆಗಳನ್ನು ನನ್ನ ಮುಂದಿಡಿ, ಅದನ್ನು ಬಿಟ್ಟು ಮನಸೋ ಇಚ್ಛೆ ತರಬೇಡಿ ಎಂದು ಸಿಎಂ ಗರಂ ಆಗಿದ್ದಾರೆ ಎನ್ನಲಾಗಿದೆ.