ಹಾಸನ : ಮಾನಸಿಕ ಅಸ್ವಸ್ಥೆಯಂತೆ ಕಾಣುತ್ತಿದ್ದ ಮಹಿಳೆಯೊಬ್ಬಳು ಕೆ.ಎಸ್.ಆರ್.ಟಿ.ಸಿ ಬಸ್ ಒಂದಕ್ಕೆ ಅಡ್ಡಲಾಗಿ ಮಲಗಿ ರಂಪಾಟ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಮೀಪದಲ್ಲಿ, “”ನನಗೆ ಕೊರೊನಾ ವೈರಸ್ ಬಂದಿದೆ ಮುಟ್ಟಿ ನೋಡೋಣ” ಎಂದು ಮಹಿಳೆಯೊಬ್ಬರು ಹೆದರಿಸುತ್ತಾ ರಸ್ತೆಯಲ್ಲಿ ಓಡಾಡಿದ್ದಾಳೆ.
ಮಹಿಳೆ ಅಡ್ಡ ಬಂದ ಪರಿಣಾಮ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಬ್ರೇಕ್ ಹಾಕಿದ್ದಾನೆ. ಈ ವೇಳೆ ಬಸ್ ಕೆಳಗೆ ಅಡ್ಡಲಾಗಿ ಮಲಗಿದ ಮಹಿಳೆ ಬಸ್ ಮುಂದೆ ಹೋಗದಂತೆ ತಡೆದಿದ್ದಾಳೆ. ಇದರಿಂದಾಗಿ ಕೆಲ ಸಮಯ ಬಸ್ ಅಲ್ಲೇ ನಿಂತಿದೆ. ಹಾಸನ ನಗರದಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೂ ಮಹಿಳೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.
ಇದರಿಂದಾಗಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ಥವಾಗಿತ್ತು. ಅಲ್ಲದೆ ಮಹಿಳೆಯು ನನಗೆ ಕೊರೊನಾ ಬಂದಿದೆ, ಯಾರಾದರೂ ಮುಟ್ಟಿ ನೋಡೋಣ ಎಂದು ರಾದ್ಧಾಂತ ಮಾಡಿದ್ದರಿಂದ ಜನ ಗಾಬರಿಯಾಗಿದ್ದರು.ನಗರದಲ್ಲಿ ಟ್ರಾಫಿಕ್ ಜಾಮ್ ಸಹ ಆಗಿದ್ದರಿಂದ ಪೊಲೀಸರಿಗೆ ನಿಯಂತ್ರಿಸುವುದು ಕಷ್ಟವಾಗಿತ್ತು. ಹೀಗಾಗಿ ಅಂತಿಮವಾಗಿ ಅಂಬುಲೆನ್ಸ್ ಕರೆಸಿ ಮಹಿಳೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಯಿತು.