ಬೆಂಗಳೂರು, – ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ ತಾಯಿ ಮಕ್ಕಳಂತಿರುವ ರೈತರು ಮತ್ತು ಭೂಮಿಯನ್ನು ರಾಜ್ಯ ಸರ್ಕಾರ ಬೇರೆ ಮಾಡುತ್ತಿದೆ ಎಂದು ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಎಸ್. ಆರ್.ಪಾಟೀಲ್ ಆರೋಪಿಸಿದರು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಬರೆದಿರುವ ರೈತರ ಭದ್ರತೆ, ದೇಶದ ಭದ್ರತೆ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ ಆಹಾರ ಭದ್ರತೆ ಸಾಧಿಸಿದೆ, ರೈತರ ಬದುಕು ಮಾತ್ರ ಸುಧಾರಣೆಯಾಗಿಲ್ಲ. ಕಾರ್ಮಿಕರ ಸಂಕಷ್ಟಗಳು ಬಗೆಹರಿದಿಲ್ಲ.
ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಬೀಜ ಕಾಯ್ದೆ, ವಿದ್ಯುತ್ ಕಾಯ್ದೆ, ಅರಣ್ಯ ಕಾಯ್ದೆ ಸೇರಿದಂತೆ ಕೃಷಿಗೆ ಸಂಬಂಧಿಸಿದಂತೆ ಮಹತ್ವದ ಕಾನೂನು ತಿದ್ದುಪಡಿಗಳು ಮತ್ತು ಆರ್‍ಸಿಇಪಿ ಒಪ್ಪಂದದ ಮಾಹಿತಿ ಸಂಗ್ರಹಿಸಿ ಪುಸ್ತಕ ತಂದಿದ್ದಾರೆ.
ಭೂ ಸುಧಾರಣಾ ಕಾಯ್ದೆ ರೈತರಿಗೆ ಬರೆದ ಮರಣ ಶಾಸನ.
ಈ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೃಷಿಕರ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುತ್ತಿದೆ. ರೈತರು ಭೂಮಿಯನ್ನು ತಾಯಿ ಎಂದು ನಂಬಿರುತ್ತಾರೆ. ಸರ್ಕಾರ ಕಾನೂನು ಮಾಡಿ ತಾಯಿ ಮಕ್ಕಳನ್ನು ಬೇರೆ ಮಾಡುತ್ತಿದೆ. ತಾಯಿಯ ಮಾರಾಟಕ್ಕೆ ಕಾಯ್ದೆ ತಿದ್ದುಪಡಿ ಮಾಡಿದೆ. ವಿಧಾನ ಪರಿಷತ್‍ನಲ್ಲಿ ವಿರೋಧ ಪಕ್ಷದ ನಾಯಕನಾಗಿ ಈ ಕಾನೂನು ಜಾರಿಗೆ ಅವಕಾಶವಾಗದಂತೆ ಪರಿಣಾಮಕಾರಿ ಹೋರಾಟ ಮಾಡುತ್ತೇನೆ ಎಂದರು.
ಕಾಯ್ದೆ ತಿದ್ದುಪಡಿಯಿಂದ ಶ್ರೀಮಂತರಿಗೆ, ಪ್ರಭಾವಿಗಳಿಗೆ ಅನುಕೂಲವಾಗಲಿದೆ. ಉತ್ತರ ಕರ್ನಾಟಕ ಭಾಗದ ಕೃಷ್ಣ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಪ್ರದೇಶ, ಮಹದಾಯಿ ನದಿಯ ಪ್ರದೇಶಗಳನ್ನು ನೋಡಿದರೆ ಅಲ್ಲಿನ ನೀರಾವರಿ ಭೂಮಿಗಳನ್ನು ನೆರೆ ರಾಜ್ಯದವರೇ ಖರೀದಿ ಮಾಡಿದ್ದಾರೆ. ಹೊರ ರಾಜ್ಯದವರು ನಮ್ಮ ನೆಲ, ಜಲ ಬಳಕೆ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ.
ಈಗ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ನೆರೆ ರಾಜ್ಯದ ಶ್ರೀಮಂತರು ಬಂದು ಮತ್ತಷ್ಟು ಭೂಮಿ ಖರೀದಿಸಲು ಮುಕ್ತ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಆತಂಕ ವ್ಯಕ್ತ ಪಡಿಸಿದರು.