ಬೆಂಗಳೂರು: ಕೊನೆಗೂ ಸಿಎಂ ಯಡಿಯೂರಪ್ಪನವರ ದೆಹಲಿ ಪ್ರವಾಸಕ್ಕೆ ಮುಹೂರ್ತ ನಿಗದಿಯಾಗಿದ್ದು, ಇತ್ತ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗೆಳು ಗರಿಗದರಿವೆ. ಅಲ್ಲದೆ ಸಚಿವಾಕಾಂಕ್ಷಿಗಳ ಎದೆ ಬಡಿತವನ್ನು ಹೆಚ್ಚಿಸಿದೆ.
ಸೆಪ್ಟೆಂಬರ್ 17ರ ಗುರುವಾರದಂದು ಸಿಎಂ ಯಡಿಯೂರಪ್ಪ ದೆಹಲಿ ಭೇಟಿಗೆ ಸಮಯ ನಿಗದಿಯಾಗಿದೆ. ಎರಡರಿಂದ ಮೂರು ದಿನಗಳ ಕಾಲ ಸಿಎಂ ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ವರಿಷ್ಠರನ್ನು ಹಾಗೂ ವಿವಿಧ ಸಚಿವಾಲಯಗಳ ಸಚಿವರನ್ನು ಸಿಎಂ ಭೇಟಿ ಮಾಡಲಿದ್ದಾರೆ. ಈ ವೇಳೆ ಸಿಎಂ ಯಡಿಯೂರಪ್ಪ ವರಿಷ್ಠರ ಜೊತೆ ಸಂಪುಟ ವಿಸ್ತರಣೆ ಸಂಬಂಧ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ. ತಮ್ಮೊಂದಿಗೆ ಸಂಪುಟ ಸೇರುವ ಆಕಾಂಕ್ಷಿಗಳ ಪಟ್ಟಿಯನ್ನು ಕೊಂಡೊಯ್ಯಲಿರುವ ಸಿಎಂ, ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೇಳಲಿದ್ದಾರೆ ಎನ್ನಲಾಗಿದೆ.
ಸಿಎಂ ಪಟ್ಟಿಯಲ್ಲಿ ವಲಸಿಗ ಮೂವರು ಎಂಎಲ್‍ಸಿ ಗಳ ಹೆಸರಿನ ಜೊತೆಗೆ ಇಬ್ಬರು ಪಕ್ಷದ ಮೂಲ ಆಕಾಂಕ್ಷಿ ಶಾಸಕರ ಹೆಸರುಗಳಿವೆ ಎನ್ನಲಾಗಿದೆ. ಸಂಪುಟ ವಿಸ್ತರಣೆಗೆ ಸಿಎಂ ಒಲವು ತೋರಿದ್ದಾರೆ. ಆದರೆ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಕಾದು ನೋಡಬೇಕಿದೆ. ಹೈಕಮಾಂಡ್ ಹೇಳಿದಂತೆ ಕೇಳಬೇಕಾಗುತ್ತದೆ. ವಿಸ್ತರಣೆಯೋ, ಪುನಾರಚನೆಯೋ ಎನ್ನುವುದು ವರಿಷ್ಠರ ಭೇಟಿ ಬಳಿಕವೇ ಸ್ಪಷ್ಟವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇದರೊಂದಿಗೆ 8,000 ಕೋಟಿ ರೂ. ನೆರೆ ಹಾನಿ ನಷ್ಟ ಪರಿಹಾರವನ್ನೂ ಸಿಎಂ ಯಡಿಯೂರಪ್ಪ ಕೇಳಲಿದ್ದಾರೆ. ಅಲ್ಲದೆ ಬಾಕಿ ಇರುವ ವಿವಿಧ ಅನುದಾನಗಳು, ಕಾಮಗಾರಿಗಳಿಗೂ ವಿವಿಧ ಸಚಿವರ ಭೇಟಿ ಮಾಡಿ ಸಿಎಂ ಒಪ್ಪಿಗೆ ಪಡೆಯಲಿದ್ದಾರೆ. ಸಿಎಂ ಜೊತೆ ಪುತ್ರ ಬಿ.ವೈ.ವಿಜಯೇಂದ್ರ ಅಥವಾ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಎಂ ದೆಹಲಿ ಭೇಟಿ ಸಚಿವಾಕಾಂಕ್ಷಿಗಳ ಎದೆ ಬಡಿತ ಹೆಚ್ಚಿಸಿದೆ. ರಾಜಕೀಯ ವಲಯದಲ್ಲೂ ಕುತೂಹಲ ಕೆರಳಿಸಿದೆ.