Breaking News

ಕೊರೋನಾತಂಕ ನಡುವೆ ಆನ್‌ಲೈನ್‌ಮೂಲಕ ಮನೆ ಬಾಗಿಲಿಗೆ ಮದ್ಯ!

Spread the love

ಬೆಂಗಳೂರು  : ರಾಜ್ಯ ಸರ್ಕಾರ ಆನ್‌ಲೈನ್‌ ಮೂಲಕ ಮನೆ ಬಾಗಿಲಿಗೆ ಮದ್ಯ ತಲುಪಿಸುವ ಬಗ್ಗೆ ಮತ್ತೆ ಗಂಭೀರ ಚಿಂತನೆ ನಡೆಸಿದ್ದು, ಈ ಕುರಿತು ಅಧ್ಯಯನ ನಡೆಸಲು ಹಿರಿಯ ಅಬಕಾರಿ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದೆ.

ಖುದ್ದು ಅಬಕಾರಿ ಸಚಿವ ಎಚ್‌.ನಾಗೇಶ್‌ ಅವರೇ ಈ ವಿಷಯ ತಿಳಿಸಿದ್ದಾರೆ. ಕಳೆದ ವರ್ಷ ನಾಗೇಶ್‌ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹೊಸ್ತಿಲಲ್ಲೇ ಈ ಬಗ್ಗೆ ಹೇಳಿಕೆ ನೀಡಿದ್ದರು. ಅದರ ಬಗ್ಗೆ ಸಾಕಷ್ಟುಟೀಕೆ ಟಿಪ್ಪಣಿ ಕೇಳಿಬಂದಿದ್ದರಿಂದ ಪ್ರಸ್ತಾವನೆ ಕೈಬಿಟ್ಟಿದ್ದರು.

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯಗಳಲ್ಲಿ ಈಗಾಗಲೇ ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅದರ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಅಬಕಾರಿ ಆಯುಕ್ತ ಲೋಕೇಶ್‌ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.

ಶೀಘ್ರವೇ ಆನ್‌ಲೈನ್‌ ಮದ್ಯ ಮಾರಾಟ ಕುರಿತು ವರದಿ ತಯಾರಿಸಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

‘ಮಳಿಗೆಗಳಿಗೆ ಹೋಗಿ ಮದ್ಯ ಖರೀದಿ ಮಾಡಲು ಕೆಲವರು ಹಿಂಜರಿಯುತ್ತಾರೆ. ಅಂತವರಿಗೆ ಆನ್‌ಲೈನ್‌ ವ್ಯವಸ್ಥೆಯಿಂದ ಅನುಕೂಲವಾಗಲಿದೆ. ಆನ್‌ಲೈನ್‌ ಮದ್ಯ ಮಾರಾಟಕ್ಕೆ ಕೆಲವೊಂದು ವಿರೋಧಗಳು ಕೂಡ ಇದೆ. ಎಲ್ಲ ವಿಚಾರಗಳ ಬಗ್ಗೆಯೂ ಅಧ್ಯಯನ ನಡೆಸಿ ಸಂಬಂಧಪಟ್ಟವರೊಡನೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಆನ್‌ಲೈನ್‌ ಮದ್ಯ ಮಾರಾಟದ ಸಾಧಕ-ಬಾಧಕಗಳ ಕುರಿತು ವರದಿ ಬಂದ ಮೇಲೆಯೇ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಂಡು ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ತೀರ್ಮಾನವೇ ಅಂತಿಮ’ ಎಂದು ಹೇಳಿದರು.

ನಿಯಮ ಪಾಲಿಸದಿದ್ದರೆ ಬಾರ್‌ ಬಂದ್‌:

ರಾಜ್ಯದಲ್ಲಿ ಬಾರ್‌ ಮತ್ತು ರೆಸ್ಟೋರೆಂಟ್‌ ಆರಂಭಕ್ಕೆ ಅವಕಾಶ ನೀಡಲಾಗಿದೆ. ಆದರೂ ಕೋವಿಡ್‌-19 ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಜತೆಗೆ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಿಯಮ ಉಲ್ಲಂಘಿಸಿದರೆ ಅಂತಹ ಬಾರ್‌, ಪಬ್‌ಗಳನ್ನು ಬಂದ್‌ ಮಾಡಲಾಗುವುದು ಎಂದು ಇದೇ ವೇಳೆ ಸಚಿವರು ಎಚ್ಚರಿಕೆ ನೀಡಿದರು.

ಬಾರ್‌, ಪಬ್‌ಗಳಿಂದ ಪ್ರತಿದಿನ 80 ಕೋಟಿ ರು.ಆದಾಯದ ನಿರೀಕ್ಷೆ ಇದೆ. ಜತೆಗೆ ಶೇ.50ರಷ್ಟುಹೆಚ್ಚುವರಿ ಆದಾಯ ಗುರಿ ಹೊಂದಲಾಗಿದೆ. ಅಬಕಾರಿ ಇಲಾಖೆಯಲ್ಲಿ 2019-20ರಲ್ಲಿ 21 ಸಾವಿರ ಕೋಟಿ ರು.ಆದಾಯದ ಗುರಿ ಹೊಂದಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ 22,700 ಕೋಟಿ ರು.ಆದಾಯ ಗಳಿಸುವ ಗುರಿ ಇದೆ ಎಂದ ಅವರು, ರಾಜ್ಯದಲ್ಲಿ ಎಂಎಸ್‌ಐಎಲ್‌ ನಿಂದ ಹೊಸದಾಗಿ 900 ಸಿಎಲ್‌-2 ಮಳಿಗೆಗಳಿಗೆ ಪರವಾನಗಿ ನೀಡುತ್ತಿದ್ದು, ಇದನ್ನು ಹೊರತು ಪಡಿಸಿ ಬೇರೆ ಯಾವುದೇ ಪರವಾನಗಿ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಜಂಟಿ ಕಾರ್ಯಾಚರಣೆ:

ಡ್ರಗ್ಸ್‌ ದಂಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಡ್ರಗ್ಸ್‌ ಬಳಸುತ್ತಿರುವ ವಿಚಾರಗಳು ಗಮನಕ್ಕೆ ಬಂದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗುವುದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಬಕಾರಿ ಮತ್ತು ಪೊಲೀಸ್‌ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಲು ಚಿಂತನೆ ನಡೆಯುತ್ತಿದ್ದು, ಶೀಘ್ರವೇ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.


Spread the love

About Laxminews 24x7

Check Also

ಜಲಜೀವನ್​​​ ಮಿಷನ್​​​ ಯೋಜನೆ ಅನುಷ್ಠಾನದಲ್ಲಿನ ತಪ್ಪುಗಳ ಬಗ್ಗೆ ತನಿಖೆ ?

Spread the loveಬೆಂಗಳೂರು: ತುಮಕೂರು ಜಿಲ್ಲೆಯ ಜಲಜೀವನ್​​ ಮಿಷನ್​​ ಯೋಜನೆ ಅನುಷ್ಠಾನದಲ್ಲಿ ನಾನಾ ತಪ್ಪುಗಳಾಗಿದ್ದು, ಸರ್ಕಾರ ತನಿಖೆ ನಡೆಸಿ ವರದಿ ನೀಡಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ