Breaking News

ಹೆಗ್ಗೋಡಿನ ಚರಕಕ್ಕೆ ಕೋವಿಡ್ 19 ಹೊಡೆತ: ‘ದಿವಾಳಿ’ ಘೋಷಣೆ

Spread the love

ಸಾಗರ: ‘ಆತ್ಮನಿರ್ಭರ ಭಾರತ’, ‘ವೋಕಲ್‌ ಫಾರ್‌ ಲೋಕಲ್‌’ ಘೋಷಣೆ ಮೊಳಗುತ್ತಿರುವ ಬೆನ್ನಲ್ಲೇ ರಾಷ್ಟ್ರವ್ಯಾಪಿ ಹೆಸರುವಾಸಿಯಾಗಿರುವ ಹೆಗ್ಗೋಡಿನ ಚರಕ ಕೈಮಗ್ಗ ನೇಕಾರಿಕೆ ಸಂಸ್ಥೆಯು ಕೋವಿಡ್ 19 ಹೊಡೆತಕ್ಕೆ ಸಿಲುಕಿ ಸದ್ದಿಲ್ಲದೆ ಕಣ್ಣು ಮುಚ್ಚಿದೆ.

ಆರ್ಥಿಕ ಹಿಂಜರಿತ, ಕೋವಿಡ್ 19 ಸಂಕಷ್ಟದಲ್ಲೂ ಚಟುವಟಿಕೆ ಮುಂದುವರಿಸಿದ್ದ ಸಂಸ್ಥೆಯು ಕಳೆದ ಒಂದೂವರೆ ವರ್ಷದಲ್ಲಿ ಎರಡೂವರೆ ಲಕ್ಷ ಮೀಟರ್‌ ಬಟ್ಟೆ ನೇಯ್ದಿತ್ತು. ಸಿದ್ಧ ಉಡುಪು ತಯಾರಿಸುವ ಕಾಯಕವನ್ನೂ ಮುಂದುವರಿಸಿತ್ತು.

800ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರಿಗೆ ಪೂರ್ಣ ವೇತನ ನೀಡಿತ್ತು. ಆದರೆ ಮೂರು ಕೋಟಿ ರೂ.ಗೂ ಹೆಚ್ಚಿನ ಕೈಮಗ್ಗ ಉತ್ಪನ್ನ ಮಾರಾಟವಾಗದಿರುವುದು ಮತ್ತು ಸರಕಾರ ಸಹಕಾರ ನೀಡದ ಹಿನ್ನೆಲೆಯಲ್ಲಿ ಆ. 28ರಂದು ‘ನಾವು ದಿವಾಳಿ’ ಎಂದು ‘ಚರಕ’ದ ಕಾರ್ಯದರ್ಶಿ ಪ್ರತಿಭಾ ಎಂ.ವಿ. ಪ್ರಕಟಿಸಿದ್ದಾರೆ.

ಏಳು ಜಿಲ್ಲೆಗಳಲ್ಲಿ ನೇಕಾರಿಕೆ
ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಹರಡಿರುವ ಸಂಸ್ಥೆಯ ನೇಕಾರಿಕೆ, ರಾಷ್ಟ್ರದಲ್ಲಿಯೇ ಹೆಸರು ಮಾಡಿರುವ ನೈಸರ್ಗಿಕ ಬಣ್ಣಗಾರಿಕೆ, ನೂಲು ಸುತ್ತುವ ಚಟುವಟಿಕೆ, ಮೂರು ಜಿಲ್ಲೆಗಳಲ್ಲಿ ವಿಸ್ತರಿಸಿರುವ ಸಂಸ್ಥೆಯ ಗಾರ್ಮೆಂಟ್‌ ವಿಭಾಗ, ವಸ್ತ್ರ ಮುದ್ರಣ ವಿಭಾಗ, ಕಸೂತಿ ವಿಭಾಗ, ನೈಸರ್ಗಿಕ ಬಣ್ಣಗಾರಿಕೆಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಎಲ್ಲವೂ ಸ್ಥಗಿತಗೊಂಡಿವೆ ಎಂದು ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಸಂಸ್ಥಾಪಕ, ದೇಸೀ ಚಿಂತನೆಯ ಪ್ರಸನ್ನ ಅಧಿಕೃತವಾಗಿ ಘೋಷಿಸಿದ್ದಾರೆ.

ಫ‌ಲ ನೀಡದ ಹೋರಾಟ
ನೇಕಾರರ ದಾರುಣ ಸ್ಥಿತಿಯನ್ನು ರಾಜ್ಯ ಸರಕಾರದ ಗಮನಕ್ಕೆ ತರುವ ಸಲುವಾಗಿ ಪ್ರಸನ್ನ ಅವರು ಎ. 10ರಿಂದ 17ರ ವರೆಗೆ ಎಂಟು ದಿನಗಳ ಕಾಲ ಉಪವಾಸ ವ್ರತ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸರಕಾರವು ‘ಪವಿತ್ರ ವಸ್ತ್ರ’ ಯೋಜನೆಯ ಹೆಸರಿನಲ್ಲಿ 60 ಲಕ್ಷ ರೂ.ಗಳ ಅನುದಾನ ಮಂಜೂರು ಮಾಡಿತ್ತು.

ಹದಿನೈದು ವರ್ಷಗಳಲ್ಲಿ ರಾಜ್ಯ ಸರಕಾರ ಹೆಚ್ಚು ಕಡಿಮೆ ಒಂದು ಕೋಟಿ ರೂ. ಮೌಲ್ಯದ ವಿವಿಧ ಯೋಜನೆ ಮತ್ತು ಅನುದಾನ ಮಂಜೂರು ಮಾಡಿದ್ದರೂ ಯಾವುದೇ ಅನುದಾನದ ಹಣವೂ ಸಂಸ್ಥೆಯನ್ನು ತಲುಪಿಲ್ಲ ಎಂದು ಪ್ರಸನ್ನ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

93 ಲಕ್ಷ ರೂ. ಅನುದಾನವೇ ಬರಲಿಲ್ಲ!
ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಕಳೆದ ಹತ್ತು ವರ್ಷಗಳಲ್ಲಿ ಸರಕಾರ ನೀಡಿದ ವಿವಿಧ ಅನುದಾನದ ಯಾವುದೇ ಮೊತ್ತ ಚರಕಕ್ಕೆ ತಲುಪಿಲ್ಲ. ನೈಸರ್ಗಿಕ ಬಣ್ಣ ಗಾರಿಕೆಯ ಕೇಂದ್ರಕ್ಕೆ ಸಂಬಂಧಪಟ್ಟು ಮಂಜೂರು ಮಾಡಿರುವ 97 ಲಕ್ಷ ರೂ. ಯೋಜನೆ ಮತ್ತು ಒಂದು ಕೋಟಿ ರೂ. ಮೊತ್ತದ ಪವಿತ್ರ ವಸ್ತ್ರ ಯೋಜನೆ ನನೆಗುದಿಗೆ ಬಿದ್ದಿವೆ. ಈ ಎರಡೂ ಯೋಜನೆಗಳನ್ನು ಒಟ್ಟುಗೂಡಿಸಿ ನೀಡಬೇಕಾಗಿರುವ 93 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಬೇಕು ಎಂದು ಸಂಸ್ಥೆಯು ಸರಕಾರಕ್ಕೆ ಪತ್ರ ಬರೆದಿದೆ.

ಕೈಮಗ್ಗ ಕ್ಷೇತ್ರದ ಸುಧಾರಣೆಯ ಯಾವುದೇ ಕೆಲಸದಲ್ಲಿ ಸರಕಾರದ ಜತೆ ಕೈಜೋಡಿಸಿ ನನ್ನ ಅನುಭವವನ್ನು ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲು ಸಿದ್ಧ. ಒಂದೊಮ್ಮೆ ಹಾಗಾಗದೆ ಚರಕ ಸಂಸ್ಥೆ ಮತ್ತು ಕರ್ನಾಟಕದ ಇತರ ನೇಕಾರಿಕೆ ಸಂಸ್ಥೆಗಳು ಮುಚ್ಚಲ್ಪಟ್ಟರೆ ನಾನು ಮತ್ತೆ ಉಪವಾಸ ವ್ರತ ಆರಂಭಿಸುವುದು ಅನಿವಾರ್ಯ.
– ಚರಕ ಪ್ರಸನ್ನ


Spread the love

About Laxminews 24x7

Check Also

ಸಿಟಿ ರವಿ ಪ್ರಕರಣ ಮುಗಿದ ಅಧ್ಯಾಯ:ಹೊರಟ್ಟಿ

Spread the loveಬೆಂಗಳೂರು, ಡಿಸೆಂಬರ್ 23: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಎಂಎಲ್​ಸಿ ಸಿಟಿ ರವಿ ಅವಾಚ್ಯ ಶಬ್ದ ಬಳಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ