ಬೆಳಗಾವಿ: ಮಾಸ್ಕ್ ಹಾಕಿಕೊಂಡವರನ್ನು ನೋಡಿದರೆ ರಾಮಾಯಣ ನೆನಪಾಗುತ್ತದೆ ಎಂದು ಹೇಳುವ ಮೂಲಕ ಕೇಂದ್ರದ ಮಾಜಿ ಸಚಿವ ಮತ್ತು ಸಂಸದ ಅನಂತಕುಮಾರ್ ಹೆಗಡೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಂಸದ ಅನಂತಕುಮಾರ್ ಹೆಗಡೆ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ. ಇದೀಗ ಕೊರೊನಾ ಕುರಿತು ಭಾಷಣ ಮಾಡುವಾಗ ಮಾತನಾಡಿದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಮಗೆ ಸುಮ್ಮನೆ ಹೆದರಿಸಿದ್ದಾರೆ. ಈ ಕೊರೊನಾ, ಕಿರೊನಾ ಏನೋ ಇಲ್ಲ. ತಪ್ಪು ತಿಳಿದುಕೊಳ್ಳಬೇಡಿ ತಮಾಷೆಗೆ ಹೇಳುವುದು ನಾನು, ಎಲ್ಲರನ್ನು ನೋಡಿದಾಗ ನನಗೆ ತುಂಬಾ ರಾಮಾಯಣ ನೆನಪಾಗುತ್ತೆ. ಎಷ್ಟು ಪ್ರೀತಿ ಅಂತ ಎಂದು ಹೇಳುವ ಮೂಲಕ ಮಾಸ್ಕ್ ಹಾಕಿಕೊಂಡವರನ್ನು ಸಂಸದ ಅನಂತಕುಮಾರ್ ಹೆಗಡೆ ಕಪಿಗಳಿಗೆ ಹೋಲಿಸಿದ್ದಾರೆ.
ಅಷ್ಟೇ ಅಲ್ಲದೇ ಇರಲಿ, ಈ ಭ್ರಮೆಯಲ್ಲಿ ನಾವು ಬಹಳ ದಿವಸ ಬದುಕುವುದು ಬೇಡ. ಅದನ್ನು ನಾವು ನಮ್ಮ ಮನೆಯಲ್ಲೇ ಎದುರಿಸಬೇಕಾಗುತ್ತದೆ. ಹೇಗೆ ನೆಗಡಿ ಬಂದಿದೆ. ಜ್ವರ ಬಂದಿದೆ. ಹಾಗೆ ಕೊರೊನಾ ಕೂಡ. ಇದನ್ನು ನಾವು ಮನೆಯಲ್ಲಿ ಎದುರಿಸಬೇಕಾಗುತ್ತದೆ. ಇದರ ಬಗ್ಗೆ ತೆಲೆಕೆಡಿಸಿಕೊಂಡರೆ ಆರ್ಥಿಕತೆ ದಿವಾಳಿತನ ಆಗುತ್ತೆ ಎಂದು ಅನಂತಕುಮಾರ್ ಹೆಗಡೆ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ…
ಕೆಲವು ದಿನಗಳ ಹಿಂದೆ ಕಾರವಾರದ ಕುಮಟಾದಲ್ಲಿ ಸಂಸದರ ಹಾಗೂ ಕೇಂದ್ರ ಸರ್ಕಾರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಬಿಎಸ್‍ಎನ್‍ಎಲ್ ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು, ದೇಶದ್ರೋಹಿಗಳೇ ಆ ಸಂಸ್ಥೆಯಲ್ಲಿ ತುಂಬಿಕೊಂಡಿದ್ದಾರೆ ಎಂದು ಕಿಡಿ ಕಾರುವ ಮೂಲಕ ವಿವಾದಿತ ಹೇಳಿಕೆ ನೀಡಿದ್ದರು.