ಹಾವೇರಿ: ದೇಶ ದ್ರೋಹದ ಹೇಳಿಕೆ ನೀಡುವ ಪ್ರಕರಣಗಳ ಕುರಿತು ಸರ್ಕಾರ ನಿಗಾ ವಹಿಸಲಿದೆ. ಇಂತಹ ಪ್ರಕರಣಗಳನ್ನು ರಾಜ್ಯದಿಂದ ಬೇರು ಸಮೇತ ಕಿತ್ತು ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಹಾವೇರಿಯಲ್ಲಿ ಮಾತನಾಡಿದ ಅವರು, ಇಂತಹ ಪ್ರಕರಣಗಳನ್ನು ಕರ್ನಾಟಕದಿಂದ ಬೇರು ಸಮೇತ ಕಿತ್ತು ಹಾಕಲು ಕ್ರಮ ಕೈಗೊಳ್ಳುತ್ತೆವೆ. ಬೆಂಗಳೂರಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗಿದೆ. ಈ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಮಾತ್ರವಲ್ಲದೆ ವಿದ್ಯಾಸಂಸ್ಥೆ, ಹಾಸ್ಟೆಲ್ ಮ್ಯಾನೇಜ್ಮೆಂಟ್ ಇಂತಹ ಘಟನೆಗಳ ಬಗ್ಗೆ ನಿಗಾ ವಹಿಸಬೇಕು. ಗೊತ್ತಿದ್ದೂ ಸುಮ್ಮನಿದ್ದರೆ ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ವಾಟ್ಸಪ್, ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡುವ ಕುರಿತು ಸಹ ಪರಿಶೀಲಿಸಬೇಕಿದೆ. ಇಂತಹ ಪೋಸ್ಟ್‍ಗಳಿಗೆ ನಿರ್ಬಂಧ ಹಾಕಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು. ಕೆಲ ಸಂಘಟನೆಗಳಿಗೆ ವಿದೇಶದಿಂದ ಹಣ ಬರುತ್ತಿರುವ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಹುಬ್ಬಳ್ಳಿಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ದೇಶದ್ರೋಹ ಹೇಳಿಕೆ ಪ್ರಕರಣವನ್ನು ಬೆಳಗಾವಿಗೆ ವರ್ಗಾಯಿಸಲಾಗಿದೆ. ಐಜಿಪಿಯವರು ಇದನ್ನು ನೋಡಿಕೊಳ್ಳುತ್ತಿದ್ದಾರೆ. ಬೆಂಗಳೂರಲ್ಲಿ 20 ಜನ ವಕೀಲರು ಅವರ ಪರ ವಾದ ಮಾಡಲು ಮುಂದೆ ಬಂದಿದ್ದಾರೆ, ರಕ್ಷಣೆ ಕೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರ ನೈತಿಕತೆ ಕುಗ್ಗುವ ರೀತಿ ಮಾತನಾಡುವುದಿಲ್ಲ. ಮೊದಲ ಹಂತದಲ್ಲಿ ಪೊಲೀಸರ ಕ್ರಮ ಊರ್ಜಿತವಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.