ಬಳ್ಳಾರಿ: ರಾಜ್ಯದಲ್ಲಿ ತಯಾರಾಗುವ ರಾಷ್ಟ್ರ ಧ್ವಜಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಹುಬ್ಬಳ್ಳಿ ಖಾದಿ ಗ್ರಾಮೋದ್ಯೋಗ ಧಾರವಾಡ ಗರಗದಲ್ಲಿ ತಯಾರಾಗುವ ರಾಷ್ಟ್ರ ಧ್ವಜಗಳು ದೇಶದ ಮೂಲೆ ಮೂಲೆಗಳಲ್ಲಿ ಹಾರಾಡುತ್ತವೆ. ಗಣಿಜಿಲ್ಲೆಯಲ್ಲಿ ತಯಾರಾಗುತ್ತಿರುವ ರಾಷ್ಟ್ರಧ್ವಜ ಲಡಾಖ್ ನಲ್ಲಿ ಹಾರಲಿದೆ.
ಈ ರಾಷ್ಟ್ರ ಧ್ವಜ ಸಾಮಾನ್ಯವಾದುದಲ್ಲಾ ರಾಜ್ಯದ ಪ್ರತಿ ಜಿಲ್ಲೆ ತಾಲೂಕು ಕೇಂದ್ರದಿಂದ ಜನರು ಹೊಲಿಗೆ ಹಾಕಿ ತಯಾರಿಸಲಾಗುತ್ತಿದೆ. ರಾಷ್ಟ್ರ ಧ್ವಜ ಅಂದ್ರೆ ಸಾಕು ನಮಗೆ ನೆನಪಿಗೆ ಬರುವುದು ಧಾರವಾಡದ ಗರಗ, ದೆಹಲಿಯ ಕೆಂಪು ಕೋಟೆಯ ಮೇಲೆ ಹಾರಾಡುವ ರಾಷ್ಟ್ರ ಧ್ವಜ ಸಹ ಇದೇ ಗರಗ ದಲ್ಲಿ ತಯಾರಾಗುತ್ತೆ. ಆದ್ರೆ ಗಣಿ ನಾಡು ಬಳ್ಳಾರಿಯಲ್ಲಿ ತಯಾರಾಗುತ್ತಿರುವ ಧ್ವಜ ದೇಶದ ಹೆಮ್ಮೆಯ ಪ್ರತೀಕವಾದ ಲಡಾಕ್ ನಲ್ಲಿ ಹಾರಾಡಲಿದೆ.ಬೆಂಗಳೂರು ಮೂಲದ ವಿನೋದಕುಮಾರ್ ಹಾಗೂ ಅವರ ಪತ್ನಿ ದೇಶದ ಗಡಿ ಲಡಾಖ್ ನಲ್ಲಿ ಹಾರಿಸಲು ಅಂದಾಜು 90×60 ಅಡಿ ಯುಳ್ಳ ರಾಷ್ಟ್ರಧ್ವಜವನ್ನ ತಯಾರಿಸುತ್ತಿದ್ದಾರೆ. ಬೆಂಗಳೂರಿನ ನೆಲಮಂಗಲದಿಂದ ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲೂಕಿಗೆ ಆಗಮಿಸಿದ ಈ ಕುಟುಂಬ ರಾಷ್ಟ್ರಧ್ವಜವನ್ನು ಹೊಲಿಗೆ ಯಂತ್ರದ ಮೂಲಕ ಸ್ಟಿಚ್ ಮಾಡುವ ಮುಖೇನ ಈ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ
ಮಾಜಿ ಶಾಸಕ ಕೆ. ನೇಮಿರಾಜ ನಾಯ್ಕ, ಬಿಜೆಪಿ ನಗರ ಘಟಕದ ಅಧ್ಯಕ್ಷ ಜೆ.ಎಂ. ಜಗದೀಶ್ ಸೇರಿದಂತೆ ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರ ಸಮಕ್ಷಮದಲ್ಲಿ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಲಯದ ಆವರಣದಲ್ಲಿ ಈ ರಾಷ್ಟ್ರಧ್ವಜಕ್ಕೆ ಹೊಲಿಗೆ ಹಾಕುವ ಕಾರ್ಯಕ್ಕೆ ಚಾಲನೆ ದೊರೆಯಿತು. ಈ ಸಂಬಂಧ ಮಾಜಿ ಶಾಸಕ ನೇಮಿರಾಜ ನಾಯ್ಕ ಅವರು ಮಾತನಾಡಿ, ಇಂದಿನ ಯುವ ಪೀಳಿಗೆಯಲ್ಲಿ ದೇಶಾಭಿಮಾನ ಬೆಳೆಸಬೇಕೆಂಬ ಉದ್ದೇಶದೊಂದಿಗೆ ಇಷ್ಟೊಂದು ದೊಡ್ಡ ಪ್ರಮಾಣದ ರಾಷ್ಟ್ರಧ್ವಜವನ್ನ ತಯಾರಿಸಲಾಗುತ್ತಿದೆ. ಹೀಗಾಗಿ, ವಿನೋದಕುಮಾರ ದಂಪತಿಗೆ ನಾನು ಧನ್ಯವಾದ ಸಲ್ಲಿಸಲು ಬಯಸುವೆ. ಅವರ ದೇಶಪ್ರೇಮಕ್ಕೆ ನಾನು ಅಭಾರಿಯಾಗಿರುವೆ. ಇಂಥದೊಂದು ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ಖುಷಿ ತಂದಿದೆ ಎಂದರು.
ಇನ್ನೂ ಈಗಾಗಲೇ ಬಹುತೇಕ ಜಿಲ್ಲಾ ತಾಲೂಕು ಕೇಂದ್ರದಲ್ಲಿ ಜನರು ಈ ರಾಷ್ಟ್ರ ಧ್ವಜಕ್ಕೆ ಹೊಲಿಗೆ ಹಾಕಿ ಕೇಸರಿ ಬಿಳಿ ಹಸಿರು ಬಣ್ಣದ ಬಟ್ಟೆ ಜೋಡಿಸಿದ್ದಾರೆ. ಇನ್ನು ಆಗಸ್ಟ್ 15 ರಂದು ಧ್ವಜಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪನವರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಲ್ಲಿಂದ ನೇರವಾಗಿ ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಈ ರಾಷ್ಟ್ರಧ್ವಜವನ್ನ ಪ್ರದರ್ಶಿಸಲಾಗುವುದು. ಬಳಿಕ ಆಗಸ್ಟ್ 25 ರಂದು ಲಡಾಖ್ ನಲ್ಲಿ ಈ ಧ್ವಜವನ್ನು ಭಾರತೀಯ ವಾಯುಪಡೆ ಸೈನಿಕರ ಸಮಕ್ಷಮದಲ್ಲೇ ಪ್ರದರ್ಶನ ನಡೆಸಲಾಗುವುದೆಂದುವಿನೋದ್ ಕುಮಾರ್ ತಿಳಿಸಿದ್ದಾರೆ.
ಇನ್ನು ವಿನೋದ್ ಕುಮಾರ್ ಈಗಾಗಲೇ ಪ್ರಧಾನಮಂತ್ರಿ ಕಚೇರಿಯ ಜೊತೆಯಲ್ಲಿ ಪತ್ರ ವ್ಯವಹಾರ ಮಾಡಿದ್ದಾರೆ. ಲಾಡಕ್ ನಲ್ಲಿ ಈ ಬಾವುಟ ಹಾರಿಸಲು ಅನುಮತಿ ದೊರೆಯುವುದು ಮಾತ್ರ ಬಾಕಿ ಇದೆ. ಅಂದುಕೊಂಡಂತೆ ಆದ್ರೆ ಅಗಸ್ಟ 25 ರಂದು ಈ ರಾಷ್ಟ್ರ ಧ್ವಜ ಲಾಡಕ್ ನಲ್ಲಿ ಹಾರಾಡಲಿದೆ.