ಹೈದರಾಬಾದ್: ಬಾಹುಬಲಿ ಸಿನಿಮಾ ಖ್ಯಾತಿಯ ನಿರ್ದೇಶಕ ಎಸ್.ಎಸ್.ರಾಜಮೌಳಿ ಹಾಗೂ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಕುರಿತು ಸ್ವತಃ ರಾಜಮೌಳಿ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದು, ನನಗೆ ಹಾಗೂ ಕುಟುಂಬದ ಸದಸ್ಯರಿಗೆ ಕೆಲ ದಿನಗಳಿಂದ ಸ್ವಲ್ಪ ಮಟ್ಟಿನ ಶೀತ, ಜ್ವರ ಕಾಣಿಸಿಕೊಂಡಿತ್ತು. ನಂತರ ಅದು ಕಡಿಮೆಯಾಯಿತು. ಆದರೂ ನಾವು ಪರೀಕ್ಷೆಗೆ ಒಳಗಾದೆವು. ಪರೀಕ್ಷೆ ವೇಳೆ ಸ್ವಲ್ಪ ಪ್ರಮಾಣದಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ವೈದ್ಯರ ಸಲಹೆಯಂತೆ ಹೋಮ್ ಕ್ವಾರಂಟೈನ್ ಆಗಿದ್ದೇವೆ ಎಂದು ತಿಳಿಸಿದ್ದಾರೆ.ಮತ್ತೊಂದು ಟ್ವೀಟ್‍ನಲ್ಲಿ, ಯಾವುದೇ ಗುಣಲಕ್ಷಣಗಳಿಲ್ಲ, ಹೀಗಾಗಿ ನಾವೆಲ್ಲರೂ ಉತ್ತಮ ಸ್ಥಿತಿಯಲ್ಲಿದ್ದೇವೆ. ಆದರೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಸೂಚನೆಗಳನ್ನು ಪಾಲಿಸುತ್ತಿದ್ದೇವೆ. ಆ್ಯಂಟಿ ಬಾಡೀಸ್ ವೃದ್ಧಿಸಲು ಕಾತರದಿಂದ ಕಾಯುತ್ತಿದ್ದೇವೆ. ಏಕೆಂದರೆ ನಾವು ನಮ್ಮ ಪ್ಲಾಸ್ಮಾ ದಾನ ಮಾಡುತ್ತೇವೆ ಎಂದು ಇನ್ನೊಂದು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.
ಕೊರೊನಾ ಹೆಚ್ಚು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗಿನಿಂದ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಕೊರೊನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ಅಲ್ಲದೆ ಕೊರೊನಾ ಸೋಂಕು ತಗುಲಿದವರನ್ನು ಕೀಳಾಗಿ ಕಾಣದಂತೆ ತಿಳಿ ಹೇಳುತ್ತಿದ್ದಾರೆ.