ಜೈಪುರ: ರಾಜಸ್ಥಾನ ಕಾಂಗ್ರೆಸ್ ಪಕ್ಷದ ಬಂಡಾಯದ ಮುನಿಸು ಮುಂದುವರಿದಿದ್ದು, ಇಂದು ಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಪಕ್ಷದ ಶಾಸಕರೊಂದಿಗೆ ರಾಜಭವನಕ್ಕೆ ಭೇಟಿ ನೀಡಿ ಶಕ್ತಿ ಪ್ರದರ್ಶನ ನಡೆಸಿದರು.
ಗವರ್ನರ್ ಭೇಟಿ ಮಾಡಿದ ಅಶೋಕ್ ಗೆಹ್ಲೋಟ್ ವಿಶೇಷ ಶಾಸನ ಸಭೆಯನ್ನು ಸಮಾವೇಶ ನಡೆಸಲು ಮನವಿ ಮಾಡಿದರು. ಇದಕ್ಕೂ ಮುನ್ನ ಫೈರ್ ಮೊಂಟ್ ಹೋಟೆಲ್ ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರು ಹೋಟೆಲ್‍ನಿಂದ ಬಸ್ ಮೂಲಕ ರಾಜಭವನಕ್ಕೆ ಆಗಮಿಸಿದ್ದರು. ರಾಜಭವನದಲ್ಲಿ ರಾಜ್ಯಪಾಲ ಕಲ್‍ರಾಜ್ ಮಿಶ್ರಾ ಅವರ ಎದುರು ಹಾಜರಾದ ಶಾಸಕರು ವಿಧಾನಸಭಾ ಅಧಿವೇಶನ ನಡೆಸುವಂತೆ ಷೋಷಣೆ ಕೂಗಿದರು.
ರಾಜ್ಯಪಾಲರ ಭೇಟಿಗೂ ಮುನ್ನ ಮಾತನಾಡಿದ ಸಿಎಂ ಅಶೋಕ್ ಗೆಹ್ಲೋಟ್, ನಮ್ಮ ಸರ್ಕಾರಕ್ಕೆ ಬಹುಮತ ಇದೆ. ಆದ್ದರಿಂದ ಬಹುಮತ ಸಾಬೀತು ಪಡಿಸಲು ಅವಕಾಶ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು. ಅಲ್ಲದೇ ಗವರ್ನರ್ ಮೇಲೆ ಒತ್ತಡ ಬರುತ್ತಿರುವುದರಿಂದಲೇ ಅವರು ಯಾವುದೇ ನಿರ್ಣಯ ಕೈಗೊಳ್ಳುತ್ತಿಲ್ಲ ಎಂದು ಹೇಳಿದರು.
ವಿಧಾನಸಭಾ ಅಧಿವೇಶನ ಕರೆಯಬೇಕು ಎಂದು ಗುರುವಾರ ಪತ್ರ ಬರೆದಿದ್ದು, ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇಷ್ಟು ಸರಳ ಪ್ರಕ್ರಿಯೆಯನ್ನು ಏಕೆ ತಡ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿಲ್ಲ. ನಮಗೆ ಪೂರ್ತಿ ಬಹುಮತವಿದೆ. ಸೋಮವಾರದಿಂದ ವಿಧಾನಸಭಾ ಅಧಿವೇಶನ ನಡೆಸಬೇಕಿದೆ. ರಾಜಸ್ಥಾನ ಜನರ ಬೆಂಬಲ ನಮ್ಮೊಂದಿಗೆ ಇದೆ. ಒಂದು ವೇಳೆ ಜನರು ರಾಜಭವನ ಎದುರು ಪ್ರತಿಭಟನೆ ನಡೆಸಿದೆ ನಾವು ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇತ್ತ ಸದನ ಸಮಾವೇಶದ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯಪಾಲ ಕಲ್‍ರಾಜ್ ಮಿಶ್ರಾ, ವಿಧಾನಸಭಾ ಅಧಿವೇಶನ ಕರೆಯುವ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಯಾವುದೇ ನಿರ್ಣಯ ಕೈಗೊಂಡರು ನಿಯಮಗಳ ಅನ್ವಯವೇ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದರು.