ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಮ್ಮೆ ಕೋವಿಡ್ ಟೆಸ್ಟ್‌ಗೆ ಒಳಗಾಗಿದ್ದು, ಈ ಬಾರಿಯೂ ವರದಿಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ.
ಸಿಎಂ ನಿವಾಸ ಮತ್ತು ಕೃಷ್ಣಾದಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಕೋವಿಡ್ ಟೆಸ್ಟ್ ಮಾಡಿಸಿದ್ದರು. ವರದಿಯಲ್ಲಿ ನೆಗೆಟಿವ್ ಬಂದಿದೆ. ಇದುವರೆಗೆ ಸುಮಾರು ನಾಲ್ಕು ಬಾರಿ ಸಿಎಂ ಯಡಿಯೂರಪ್ಪ ಕೋವಿಡ್ ಪರೀಕ್ಷೆ ಮಾಡಿಸಿದ್ದಾರೆ. ಈ ಎಲ್ಲಾ ಟೆಸ್ಟ್‌ಗಳಲ್ಲಿ ಸಿಎಂಗೆ ಕೊರೊನಾ ನೆಗೆಟಿವ್ ಬಂದಿದೆ. ಇದರಿಂದ ಸಿಎಂ ಮತ್ತು ಅಧಿಕಾರಿಗಳು ಪೂರ್ತಿ ನಿರಾಳರಾಗಿದ್ದಾರೆ.
ಕೃಷ್ಣಾ, ಕಾವೇರಿ ನಿವಾಸಗಳಲ್ಲಿ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಸಿಎಂ ನಿವಾಸ ಕಾವೇರಿ, ಗೃಹ ಕಚೇರಿ ಕೃಷ್ಣಾ ಬಳಿ ಖಾಸಗಿ ಏಜೆನ್ಸಿಯ ಸಿಬ್ಬಂದಿಯಿಂದ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ.
ಸಿಎಂ ಅವರ ಗೃಹ ಕಚೇರಿ ಕೃಷ್ಣಾ, ಸರ್ಕಾರಿ ನಿವಾಸ ಕಾವೇರಿ ಮತ್ತು ಅಧಿಕೃತ ನಿವಾಸ ಧವಳಗಿರಿಯಲ್ಲಿರುವ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಕೆಲ ದಿನಗಳ ಕಾಲ ಮನೆಯಲ್ಲಿ ಉಳಿದಿದ್ದರು.