ಧಾರವಾಡ: ಧಾರವಾಡ ಹೊರವಲಯದ ನಿರ್ಜನ ಪ್ರದೇಶದಲ್ಲಿ ನಡೆದ ಯುವತಿಯ ಕೊಲೆ ಪ್ರಕರಣದಲ್ಲಿ ಬಗೆದಷ್ಟು ಹೊಸಹೊಸ ವಿಚಾರಗಳು ಬಯಲಾಗುತ್ತಿವೆ. ಈ ಕೊಲೆ ಮಾಡಿದ್ದ ಸಾಬೀರ್ ಆಕೆಯ ಮೊಬೈಲ್‌ನಿಂದ ಆಕೆಯ ತಂದೆಗೆ, ʻನನಗೆ ಜೀವನ ಸಾಕಾಗಿದೆ. ನಾನು ಮನೆಗೆ ಬರೋದಿಲ್ಲ. ನನ್ನನ್ನು ಹುಡುಕಬೇಡಿʼ ಎಂದು ಮೆಸೇಜ್ ಮಾಡಿದ್ದ ಎಂಬ ವಿಚಾರ ತಿಳಿದುಬಂದಿದೆ.
ಝಾಕಿಯಾ ಹಾಗೂ ಸಾಬೀರ್ ಇಬ್ಬರೂ ಕಳೆದ ಮೂರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇವರ ಪ್ರೀತಿಯ ವಿಷಯ ಇಬ್ಬರ ಮನೆಯಲ್ಲೂ ಗೊತ್ತಾಗಿ, ಮನೆಯವರೂ ಇವರ ಮದುವೆ ಮಾಡಲು ನಿಶ್ಚಯಿಸಿದ್ದರು. ಝಾಕಿಯಾಳನ್ನು ಸಾಬೀರ್ ಜ.21 ರಂದು ಪರಿಚಯಸ್ಥರ ಕಾರು ತಂದು ಝಾಕಿಯಾಳನ್ನು ಹೊರಗಡೆ ಕರೆದುಕೊಂಡು ಹೋಗಿದ್ದ. ಬಳಿಕ ನಿರ್ಜನ ಪ್ರದೇಶದತ್ತ ತೆರಳಿದ್ದ. ಈ ವೇಳೆ ಕಾರಿನಲ್ಲಿ ಇಬ್ಬರ ನಡುವೆ ಜಗಳ ಆಗಿ, ಈ ಜಗಳ ವಿಕೋಪಕ್ಕೆ ತಿರುಗಿ ಕೊನೆಗೆ ಸಾಬೀರ್ ಝಾಕಿಯಾಳನ್ನು ಅವಳ ವೇಲ್‌ನಿಂದ ಬಿಗಿದು ಕೊಲೆ ಮಾಡಿದ್ದ.
ಹತ್ಯೆ ಬಳಿಕ ನಿರ್ಜನ ಪ್ರದೇಶದಲ್ಲಿ ಶವ ಎಸೆದು ಅಲ್ಲೇ ಆಕೆಯ ಮೊಬೈಲ್‌ನಿಂದಲೇ, ಆಕೆಯ ಮನೆಯವರಿಗೆ ಮೆಸೇಜ್ ಮಾಡಿ ಕೊನೆಗೆ ಆ ಮೊಬೈಲ್ ಸ್ವಿಚ್ ಆಫ್ ಮಾಡಿ ಅಲ್ಲೇ ಇಟ್ಟು ಹೋಗಿದ್ದ. ಮಾರನೇ ದಿನ ಎಲ್ಲರೂ ಶವದತ್ತ ಬಂದಾಗ, ಸಾಬೀರ್ ತನಗೇನೂ ಗೊತ್ತಿಲ್ಲವೆಂಬಂತೆ ಅದೇ ಸ್ಥಳಕ್ಕೆ ಬಂದು ನಿಂತಿದ್ದ. ಆದರೆ, ಸಾಬೀರ್ ತನ್ನ ಮೊಬೈಲ್‌ನಲ್ಲಿದ್ದ ಝಾಕಿಯಾಳ ಎಲ್ಲಾ ಫೋಟೋ, ಕಾಲ್ ಹಿಸ್ಟರಿ ಹಾಗೂ ವಾಟ್ಸಪ್ ಚಾಟಿಂಗ್ ಎಲ್ಲವನ್ನೂ ಡಿಲೀಟ್ ಮಾಡಿದ್ದ. ಆಗಲೇ ಪೊಲೀಸರಿಗೆ ಆತನ ಮೇಲೆ ಸಂಶಯ ಮೂಡಿತ್ತು. ಕೊನೆಗೆ ಪೊಲೀಸರು ಆತನನ್ನು ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ.
ಧಾರವಾಡ ಪೊಲೀಸರು ಸಾಬೀರ್‌ನನ್ನೂ ಹೆಚ್ಚಿನ ವಿಚಾರಣೆಗೊಳಪಡಿಸಿದ್ದು, ಸ್ಥಳ ಮೊಹಜರು ಕೂಡ ಮಾಡಿದ್ದಾರೆ.
Laxmi News 24×7