ಬೆಳ್ತಂಗಡಿ (ದಕ್ಷಿಣ ಕನ್ನಡ) : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಹೋರಾಟಗಾರ, ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶಿಸಲಾಗಿದೆ.
ಪುತ್ತೂರು ಸಹಾಯಕ ಆಯುಕ್ತ (ಎಸಿ) ಸ್ಟೆಲ್ಲಾ ವರ್ಗಿಸ್ ಅವರಿಗೆ ಬೆಳ್ತಂಗಡಿಯ ಪೊಲೀಸರು ಪ್ರಕರಣದ ಬಗ್ಗೆ ವರದಿ ನೀಡಿದ್ದು, ಇದರ ಪರಿಶೀಲನೆ ನಡೆಸಿ ಈ ವರದಿಯ ಆಧಾರ ಹಿನ್ನೆಲೆಯಲ್ಲಿ ಸೆ.18ರಂದು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಒಂದು ವರ್ಷದ ಅವಧಿಗೆ ಗಡಿಪಾರು ಆದೇಶ ಮಾಡಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗಡಿಪಾರು ಮಾಡಿದ ಆದೇಶದ ಪ್ರತಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿಗೆ ಬಂದ ಬಳಿಕ ಗಡಿಪಾರು ಮಾಡುವ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯ ಪ್ರಕರಣ ಮತ್ತು ಆ ಪ್ರಕರಣಕ್ಕೆ ಸಂಬಂದಿಸಿದಂತೆ ದಸ್ತಗಿರಿ ಮಾಡಲು ಬಂದಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಹೊರತುಪಡಿಸಿ ನಾಲ್ಕು ಪ್ರಕರಣಗಳು ಇವರ ವಿರುದ್ಧ ದಾಖಲಾಗಿರುತ್ತವೆ.
ಗಡಿಪಾರು ಪ್ರಕ್ರಿಯೆ ನಡೆಯುತ್ತಿರುವಾಗ ದಾಖಲಾದ ಪ್ರಕರಣಗಳು:
- Belthangady Cr.no 75/2025 U/s 189(2), 191(1) (2), 115(2), 351(2), 352 R/w 190 BNS
- Belthangady PS Cr No 77/2025 U/s 189(2), R/w 190(2) BNS
- Belthangady PS Cr No 79/2025 U/s 353(2) BNS
- Belthangady PS Cr No 108/2025 U/s: 25(1)(1-A) And 25(1)(1-B)(a) Arms Act 1959
ಗಡಿಪಾರು ಪ್ರಕ್ರಿಯೆ ನಡೆಯುತ್ತಿರುವಾಗಲೇ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಹೆಚ್ಚಿನ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ತುರ್ತಾಗಿ ಗಡಿಪಾರು ಆದೇಶ ಹೊರಡಿಸಲಾಗಿದೆ. ಅವರ ಗಡೀಪಾರಿಗೆ ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸರು ಅಥವಾ ನ್ಯಾಯಾಲಯ ನೋಟಿಸ್ ಜಾರಿ ಮಾಡಿದಾಗ ಜಿಲ್ಲೆಯನ್ನು ಪ್ರವೇಶಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಎಸ್ಪಿ ಕಚೇರಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮಾನ್ವಿಗೆ ಕರೆತರದಂತೆ ಪ್ರತಿಭಟನೆ: ಮಹೇಶ ಶೆಟ್ಟಿ ತಿಮರೋಡಿಯನ್ನು ಮಾನ್ವಿಗೆ ಗಡಿಪಾರು ಮಾಡದಂತೆ ರಾಯಚೂರಿನಲ್ಲಿಂದು ಪ್ರತಿಭಟನೆ ನಡೆಸಲಾಯಿತು. ನಗರದ ಅಂಬೇಡ್ಕರ್ ವೃತ್ತದ ಬಳಿ ದಲಿತ ಸೇನೆ ಹಾಗೂ ಸಮಾನ ಮನಸ್ಕರ ವೇದಿಕೆಯಿಂದ ಹೋರಾಟ ಮಾಡುವ ಮೂಲಕ ಮಹೇಶ ಶೆಟ್ಟಿ ತಿಮರೋಡಿಯನ್ನು ಮಾನ್ವಿಗೆ ಕರೆತರದಂತೆ ಒತ್ತಾಯಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಮಹೇಶ್ ಶೆಟ್ಟಿ ತಿಮರೋಡಿಯನ್ನು ಒಂದು ವರ್ಷದ ಅವಧಿಗೆ ಗಡಿಪಾರು ಆದೇಶ ಮಾಡಲಾಗಿದೆ. ಸರ್ಕಾರ ಈ ಆದೇಶವನ್ನು ಮರುಪರಿಶೀಲನೆ ಮಾಡಿ ಬೇರೆ ಎಲ್ಲಾದರೂ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಧರ್ಮಸ್ಥಳದ ಬುರುಡೆ ಪ್ರಕರಣ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣ ಮಾತ್ರವಲ್ಲದೆ 32 ಪ್ರಕರಣಗಳು ಇವರ ಮೇಲಿವೆ. ಇಂತವರನ್ನು ಮಾನ್ವಿಗೆ ಕರೆತರಬಾರದು ಹಾಗೂ ಜಿಲ್ಲೆಗೆ ಬೇಡವೇ ಬೇಡ, ಯಾವುದಾದರೂ ಪ್ರದೇಶಕ್ಕೆ ರವಾನಿಸುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.