Breaking News

ಬೆಳಗಾವಿ ರಾಜ್ಯದ ಅತಿ ಹೆಚ್ಚು ವಿಸ್ತೀರ್ಣ ಹೊಂದಿದ ದೊಡ್ಡ ಜಿಲ್ಲೆ ಷ್ಟಾಚಾರ ಮುಕ್ತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು: ಲೋಕಾಯುಕ್ತ ನ್ಯಾಯಮೂರ್ತಿ

Spread the love

ಬೆಳಗಾವಿ ರಾಜ್ಯದ ಅತಿ ಹೆಚ್ಚು ವಿಸ್ತೀರ್ಣ ಹೊಂದಿದ ದೊಡ್ಡ ಜಿಲ್ಲೆಯಾಗಿದ್ದು, ಆಡಳಿತಾತ್ಮಕವಾಗಿ ಸುಧೀರ್ಘವಾದ ಕ್ಷೇತ್ರವಾಗಿದೆ. ಜಿಲ್ಲೆಯನ್ನು ಮಾದರಿ, ಭ್ರಷ್ಟಾಚಾರ ಮುಕ್ತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಗೌರವಾನ್ವಿತ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ ಅವರು ನುಡಿದರು.
ಸುವರ್ಣ ವಿಧಾನ ಸೌಧದ ಸೆಂಟ್ರಲ್ ಹಾಲ್ ನಲ್ಲಿ ಬುಧವಾರ (ಆ.06) ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಲೋಕಾಯುಕ್ತ ಪ್ರಕರಣಗಳ ವಿಲೇವಾರಿ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರಕಾರವು ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಅದಕ್ಕೆ ಸಾಕಷ್ಟು ಅನುದಾನವನ್ನು ಒದಗಿಸುತ್ತಿದೆ. ಸರಕಾರದ ಯೋಜನೆ ಹಾಗೂ ಅನುದಾನವನ್ನು ಸಮರ್ಪಕ ಹಾಗೂ ಪ್ರಾಮಾಣಿಕವಾಗಿ ಅರ್ಹರಿಗೆ ತಲುಪಿಸುವುದು ಎಲ್ಲ ಅಧಿಕಾರಿಗಳ ಕರ್ತವ್ಯ. ಒಂದು ವೇಳೆ ಅಧಿಕಾರಿ ಸಿಬ್ಬಂದಿಗಳು ಭ್ರಷ್ಟಾಚಾರ ನಡೆಸಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ವಹಿಸಲಾಗುವುದು ಎಂದರು.
ಜಿಲ್ಲೆಯ ಆಡಳಿತದಲ್ಲಿ ಜನಪರ ಕಾಳಜಿ, ಚಾಕಚಕ್ಯತೆ ಇದ್ದರೆ ರಾಜ್ಯದ ಅಭಿವೃದ್ಧಿಯಲ್ಲಿ ದೊಡ್ಡ ಕೊಡುಗೆ ನೀಡುವುದರ ಜೊತೆಗೆ ಸರಕಾರದ ಅನುದಾನ ಅರ್ಹರಿಗೆ ಪ್ರಾಮಾಣಿಕವಾಗಿ ತಲುಪಿಸಿದಲ್ಲಿ ಜನರ ಜೀವನ ಮಟ್ಟ ಸುಧಾರಣೆಯಾಗುತ್ತದೆ.
ಸರ್ಕಾರಿ ನೌಕರರಿಗೆ ಸರಕಾರವು ಅನೇಕ ಸವಲತ್ತುಗಳನ್ನು ನೀಡಿದೆ ಅದರಲ್ಲಿ ಉತ್ತಮ ಜೀವನ ಸಾಗಿಸಬಹುದಾಗಿದೆ. ಆದರೆ ಕೆಲ ಅಧಿಕಾರಿಗಳು ಅತಿ ಆಸೆಗಾಗಿ ಭ್ರಷ್ಟಾಚಾರದಲ್ಲಿ ತೊಡಗುತ್ತಿರುವ ಕುರಿತು ದೂರಗಳು ಬಂದಿದ್ದು, ಭ್ರಷ್ಟಾಚಾರ ಸಾಬೀತಾದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ನಿರ್ದಾಕ್ಷಣ್ಯವಾಗಿ ಕ್ರಮ ವಹಿಸಲಾಗುವುದು.
ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗೆ ಅವರದೇ ಆದಂತಹ ಕಾರ್ಯಗಳನ್ನು ವರ್ಗೀಕರಣ ಮಾಡಿ ಕೊಡಲಾಗಿರುತ್ತದೆ. ಈ ಕಾರ್ಯ ಪರೀಶಿಲನೆಗಾಗಿ ಮೇಲುಸ್ತುವಾರಿಯನ್ನು ನೇಮಿಸಲಾಗಿದ್ದರೂ ಸಹ ಸರಕಾರಿ ಕಾರ್ಯಗಳು ಸುಗಮವಾಗಿ ಸಾಗುತ್ತಿಲ್ಲ. ಒಬ್ಬ ವ್ಯಕ್ತಿ ಒಂದೇ ಕೆಲಸದ ವೇಳೆ ಪದೇ ಪದೇ ಕಚೇರಿಗೆ ಆಗಮಿಸುತ್ತಾನೆ ಎಂದರೆ ಕಚೇರಿಯಲ್ಲಿ ಕೆಲಸಗಳು ಸುಗಮವಾಗಿ ಸಾಗುತ್ತಿಲ್ಲ ಎಂದರ್ಥವಾಗುತ್ತದೆ.
ಅಧಿಕಾರಿ, ಸಿಬ್ಬಂದಿಗಳು ದುರಾಸೆಗೊಳಗಾಗಿ ತಾವು ಮಾಡುವ ತಪ್ಪಿಗೆ ತಮ್ಮ ಇಡೀ ಕುಟುಂಬವನ್ನು ಮುಜುಗುರಕ್ಕೆ ತಳ್ಳುತ್ತಾರೆ. ನಾವು ಬೆಳೆದ ಬಂದ ಹಾದಿಯಲ್ಲಿ, ತಂದೆ ತಾಯಿಯರ ಮಾರ್ಗದರ್ಶನದಲ್ಲಿ ಪ್ರಜ್ಞೆಯೊಂದಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು.
ಸರಕಾರಿ ಅಧಿಕಾರಿ, ಸಿಬ್ಬಂದಿಗಳು ಕಾನೂನು ಪ್ರಕಾರ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸದಲ್ಲಿ ಮಾತ್ರ ಜನ ಸೇವಕನಾಗುತ್ತಾನೆ. ಆಗ ಸರಕಾರಿ ಕೆಲಸ ದೇವರ ಕೆಲಸ ಎಂಬ ಸಂದೇಶಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.
ಸಾರ್ವಜನಿಕ ಸೇವೆಯಲ್ಲಿ ಇರುವ ಪ್ರತಿಯೊಬ್ಬರು ಲೋಕಾಯುಕ್ತ ಕಾಯ್ದೆಯ ಬಗ್ಗೆ ಅರಿವು ಹೊಂದಿರಬೇಕು. ಈ ಕಾಯ್ದೆಯಡಿ ಸಾರ್ವಜನಿಕ ಸೇವೆಯಲ್ಲಿ ಕಾರ್ಯನಿರ್ವಹಿಸುವವರು ಮಾಡುವ ತಪ್ಪು ಸಣ್ಣದಾಗಲಿ ದೊಡ್ಡದಾಗಲಿ ಅದಕ್ಕೆ ಶಿಕ್ಷೆ ಖಚಿತವಾಗಿರುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ ಅವರು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿನ ಕೆರೆಗಳ ರಕ್ಷಣೆ ಹಾಗೂ ಸೂಕ್ತ ನಿರ್ವಹಣೆಯಾಗಬೇಕು. ಇವುಗಳ ಸೂಕ್ತ ನಿರ್ವಹಣೆ ಹಾಗೂ ರಕ್ಷಣೆ ಮಾಡುವದು ಸಂಬಂಧಿಸಿದ ಅಧಿಕಾರಿಯ ಮೂಲಭೂತ ಕರ್ತವ್ಯವಾಗಿದೆ. ಈ ಕುರಿತು ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರಕರಣಗಳು ದಾಖಲಾಗಿದ್ದು ಇದನ್ನು ಗಂಭೀರಾವಗಿ ಪರಿಗಣಿಸಲಾಗುವುದು ಎಂದು ಹೇಳಿದರು.
ನಗರವನ್ನು ಸ್ವಚ್ಛವಾಗಿ ಇಡುವದು ಮುಖ್ಯವಾಗಿದೆ. ರಾಜ್ಯದ ಸಾಕಷ್ಟು ಸರಕಾರಿ ಆಸ್ಪತ್ರೆಗಳಲ್ಲಿನ ವ್ಯವಸ್ಥೆ ಸರಿಯಾಗಿಲ್ಲ. ಆದರೂ ಬೆರಳಣಿಕೆಯಷ್ಟು ಆಸ್ಪತ್ರೆಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಬಡ ಜನರಿಗೆ ಉಚಿತ ಹಾಗೂ ಉತ್ತಮ ಆರೋಗ್ಯ ಸೇವೆ ನೀಡುವಂತಹ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಶೋಚನೀಯವಾಗಿರುವದು ಕಳವಳಕಾರಿಯಾದ ಸಂಗತಿಯಾಗಿದೆ ಎಂದರು.
ಜಿಲ್ಲೆಯಲ್ಲಿನ ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ, ಸಿಬ್ಬಂದಿಗಳ ವಿವರ, ಜೌಷಧಿಗಳ ದಾಸ್ತಾನಿನ ಮಾಹಿತಿಯನ್ನು ಒದಗಿಸಲು ತಿಳಿಸಿದ ಅವರು ಈ ಭಾಗದಲ್ಲಿ ಅನಧಿಕೃತ ಮಧ್ಯ ಮಾರಾಟಗಾರರ ಮೇಲೆ ಪ್ರಕರಣ ದಾಖಲಿಸಿ ಕ್ರಮ ವಹಿಸುವಂತೆ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ಬಾಕಿ ಇರುವ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಜಿಲ್ಲೆಯ ಕೆರೆಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಒತ್ತುವರಿಯಾದಂತಹ ಕೆರೆಗಳ ಒತ್ತುವರಿ ತೆರೆವಿಗೆ ಕ್ರಮವಹಿಸಲಾಗುತ್ತಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪೌತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಲಾಗುವುದು ಎಂದರು.
ಪೋಲಿಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಅವರು ಮಾತನಾಡಿ, ಮಾದಕ ವಸ್ತುಗಳ ಮಾರಾಟದ ಮೇಲೆ ತೀವ್ರ ನಿಗಾವಹಿಸಿ ಕೆಲ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಅವರು ಮಾತನಾಡಿ, ಜಿಲ್ಲೆಯ ಶಾಲೆಗಳಲ್ಲಿ ಪಾಲಕರ ಶಿಕ್ಷಕರ ಸಭೆಗಳನ್ನು ಆಯೋಜಿಸುವದರ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗೆ ಅನುಕೂಲವಾಗುತ್ತಿದೆ. ಪ್ರೌಢಶಾಲಾ ಹಂತದಲ್ಲಿ ಪ್ರತಿಭಾನ್ವೇಷಣೆ ಕಾರ್ಯಕ್ರಮ ಆಯೋಜಿಸುವದರ ಮೂಲಕ ಪ್ರತಿಭಾನ್ವಿತ ವಿಧ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುತ್ತಿದೆ.
ಜಿಲ್ಲಾ ಪಂಚಾಯತ ವತಿಯಿಂದ ಗ್ರಾಮಗಳ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿನವ ಜೈನ್, ಲೋಕಾಯುಕ್ತ ಕಾರ್ಯದರ್ಶಿ ಶ್ರೀನಾಥ, ಅಪರ ನಿಬಂಧಕರುಗಳಾದ ಪ್ರಕಾಶ ನಾಡಿಗೇರ, ಸಿ.ರಾಜಶೇಖರ, ರಮಾಕಾಂತ ಚೌವೆನ, ಶುಭವೀರ ಜೈನ್, ಆಪ್ತ ಸಹಾಯಕರಾದ ಶ್ರೀಕಾಂತ ಕೆ, ಬೆಳಗಾವಿ ಲೋಕಾಯುಕ್ತ ಪೋಲಿಸ್ ಅಧೀಕ್ಷಕರಾದ ಹನುಮಂತರಾಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಬೆಳಗಾವಿ ಪ್ರತಿ ವರ್ಷದಂತೆ ಈ ವರ್ಷವೂ 98ನೇ ನಾಡ ಹಬ್ಬ ಉತ್ಸವವನ್ನು ಸೆ.22ರಿಂದ ಸೆ.26ರವರೆಗೆ ನಗರದ ಕನ್ನಡ ಸಾಹಿತ್ಯ ‌ಭವನದಲ್ಲಿ ಆಯೋಜಿಸಲಾಗಿದೆ

Spread the loveಬೆಳಗಾವಿ ಪ್ರತಿ ವರ್ಷದಂತೆ ಈ ವರ್ಷವೂ 98ನೇ ನಾಡ ಹಬ್ಬ ಉತ್ಸವವನ್ನು ಸೆ.22ರಿಂದ ಸೆ.26ರವರೆಗೆ ನಗರದ ಕನ್ನಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ