ರಾಯಚೂರು, ಆಗಸ್ಟ್ 03: ಪತಿಯನ್ನು ಪತ್ನಿ ಕೃಷ್ಣಾ ನದಿಗೆ ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪೋಕ್ಸೋ ಕಾಯ್ದೆಯಡಿ (Pocso Case) ಪತಿ ತಾತಪ್ಪನನ್ನು ರಾಯಚೂರು (Raichur) ಮಹಿಳಾ ಪೊಲೀಸರು ಬಂಧಿಸಿದ್ದಾರೆ. ತಾತಪ್ಪ ವಿರುದ್ಧ ಬಾಲ್ಯ ವಿವಾಹ (Child Marriage) ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆರೋಪಿ ಪತಿ ತಾತಪ್ಪ 16 ವರ್ಷದ ಅಪ್ರಾಪ್ತೆಯನ್ನು ಮದುವೆಯಾಗಿದ್ದನು. ಕೌಟುಂಬಿಕ ಕಲಹ ಹಿನ್ನೆಲೆ ಪತಿ ತಾತಪ್ಪನನ್ನು ಪತ್ನಿ ಕೊಲೆ ಮಾಡಲು ಯತ್ನಿಸಿದ್ದಳು ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣದ ತನಿಖೆ ವೇಳೆ ಬಾಲ್ಯ ವಿವಾಹವಾಗಿದ್ದು ಬಹಿರಂಗವಾಗಿದೆ. ಈ ಸಂಬಂಧ ತಾತಪ್ಪನನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ
ಏನಿದು ಪ್ರಕರಣ?
ಇತ್ತೀಚೆಗೆ ರಾಯಚೂರು ತಾಲ್ಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿಂದ ಪತಿ ತಾತಪ್ಪನನ್ನ ತಳ್ಳಿ ಪತ್ನಿ ಕೊಲೆಗೆ ಯತ್ನಿಸಿದ್ದಳು ಎನ್ನುವ ಆರೋಪ ಕೇಳಿಬಂದಿತ್ತು. ಪ್ರಕರಣದ ತನಿಖೆಗೆ ನಡೆಸಿದ ಪೊಲೀಸರಿಗೆ ತಾತಪ್ಪನ ಪತ್ನಿ ಅಪ್ರಾಪ್ತೆ ಎನ್ನುವ ವಿಷಯ ಗೊತ್ತಾಗಿತ್ತು. ಈ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗದ ಸೂಚನೆ ಮೆರೆಗೆ ರಾಯಚೂರಿನ ಮಹಿಳಾ ಠಾಣೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರಡಿ ಕೇಸ್ ದಾಖಲಾಗಿತ್ತು. ಆದರೆಮ ಪೋಕ್ಸೋ ಕಾಯ್ದೆ-2012 ದಾಖಲಾಗದ ಹಿನ್ನೆಲೆ ರಾಯಚೂರು ಮಹಿಳಾ ಠಾಣೆ ಪೊಲೀಸರು ವಿರುದ್ಧ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಗರಂ ಆಗಿತ್ತು. ಈ ಬಗ್ಗೆ ಖುದ್ದು ಐಜಿಗೆ ಮಕ್ಕಳ ಆಯೋಗ ದೂರು ನೀಡಿದ್ದರು.
ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ದೂರು ನೀಡುತ್ತಿದ್ದಂತೆ ಬಾಲ್ಯವಿವಾಹ ನಿಷೇಧ ಕಾಯಿದೆ ಅಡಿ ಪ್ರಕರಣದಲ್ಲಿ ಸಿಲುಕಿದ್ದ ಪತಿ ತಾತಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಪೋಕ್ಸೋ ಕಾಯಿದೆ ಅಡಿ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.