ಶಹಾಪುರ ವಿಭಾಗದಲ್ಲಿ ಮನೆ-ಮನೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ…
ಮಾದಕ ವಸ್ತು ಮುಕ್ತ ನಗರವನ್ನಾಗಿಸಲು ಸಹಕರಿಸಿ; ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ
ಬೆಳಗಾವಿಯ ಶಹಾಪುರ ವಿಭಾಗ ವ್ಯಾಪ್ತಿಯಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪೊಲೀಸರು ಜನಸ್ನೇಹಿಯಾಗಿ ಸದಾ ಜನಸೇವೆಯನ್ನು ಮಾಡಲಿದ್ದು, ಬೆಳಗಾವಿಯನ್ನು ಮಾದಕ ವಸ್ತು ಮುಕ್ತ ನಗರವನ್ನಾಗಿಲು ಸಹಕರಿಸಬೇಕೆಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಕರೆ ನೀಡಿದರು.

ಬೆಳಗಾವಿ ಶಹಾಪುರ ವಿಭಾಗದಲ್ಲಿ ಶನಿವಾರ ಸಂಜೆ ಮನೆ ಮನೆಗೆ ಪೊಲೀಸ್ ಉಪಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಬೆಳಗಾವಿ ನಗರದಲ್ಲಿ ನೂತನ ಯೋಜನೆಯನ್ನು ಜಾರಿ ಮಾಡಿರುವ ನಗರ ಪೊಲೀಸ್ ಆಯುಕ್ತರ ಮನೆ ಮನೆ ಪೊಲೀಸ್ ಕಾರ್ಯಕ್ರಮಕ್ಕೆ ನಗರಸೇವಕರಾದ ರವಿ ಸಾಳುಂಕೆ, ಗಿರೀಶ್ ಧೋಂಗಡಿ, ನಾಮನಿರ್ದೇಶಿತ ನಗರಸೇವಕ ರಮೇಶ್ ಸೊಂಟಕ್ಕಿ, ನೇತಾಜಿ ಜಾಧವ್ ಇನ್ನುಳಿದವರು ಪ್ರಶಂಸೆ ವ್ಯಕ್ತಪಡಿಸಿ, ಅಭಿನಂದಿಸಿದರು.
ಇನ್ನು ಶಹಾಪೂರ ವಿಭಾಗದ ಜನರು ಕೂಡ ಮನೆ ಮನೆಗೆ ಪೊಲೀಸ್ ಉಪಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಮೊದಲು ಜನರು ಮತ್ತು ಪೊಲೀಸರ ಭೇಟಿ ಕೇವಲ ಪೊಲೀಸ್ ಮಾಸಾಚರಣೆ ವೇಳೆ ಮಾತ್ರ ಆಗುತ್ತಿತ್ತು. ಈಗ ಮನೆ ಮನೆ ಪೊಲೀಸ್ ಕಾರ್ಯಕ್ರಮ ನಮ್ಮ ಸಮಸ್ಯೆಗಳನ್ನು ತಿಳಿಸಲು ಸಹಕಾರಿಯಾಗಿದೆ ಎಂದರು. ಶಾಲೆಗಳಲ್ಲಿ ಮಕ್ಕಳಿಗೆ ಗುಡ ಟಚ್ ಬ್ಯಾಡ್ ಟಚ್ ಕುರಿತು ಜಾಗೃತಿ ಮೂಡಿಸಲು ಸೂಚನೆಯಿದ್ದರೂ, ಕೆಲವೊಂದು ಕಡೆ ಅದರ ಬಗ್ಗೆ ಹೇಳಿಕೊಡುತ್ತಿಲ್ಲ. ಇದನ್ನು ಕಡ್ಡಾಯವಾಗಿ ಮಕ್ಕಳಿಗೆ ತಿಳಿಸಿಕೊಡಬೇಕು.

ಇನ್ನು ನಗರದಲ್ಲಿ ಜನದಟ್ಟಣೆ ಕಡಿಮೆಯಿರುವ ಸ್ಥಳಗಳಲ್ಲಿ ಹೆಚ್ಚು ನಿಗಾವಹಿಸಬೇಕು. ಇಂತಹ ಸ್ಥಳಗಳೇ ಗಾಂಜಾ ಮತ್ತು ಜೂಜು ಅಡ್ಡೆಗಳಾಗುತ್ತಿದ್ದು, ಪೊಲೀಸರ ನಿಗಾ ಹೆಚ್ಚಿಸಿ ಗಾಂಜಾ ಜೂಜೂ ಅಡ್ಡೆಗಳನ್ನು ತಗ್ಗಿಸಬೇಕೆಂದರು.
ಇನ್ನು ಈ ಭಾಗದ ಸಾರಾಯಿ ಅಂಗಡಿಗಳು ಬೆಳಗಿನ ಜಾವವೇ ತೆರದುಕೊಳ್ಳುವುದರಿಂದ ಕಾರ್ಮಿಕರು ಬೆಳಿಗ್ಗೆ ಬೆಳಿಗ್ಗೆಯೇ ಸಾರಾಯಿ ಕುಡಿದು ಕೆಲಸಕ್ಕೆ ಬರುತ್ತಾರೆ. ಇದರಿಂದಾಗಿ ಮನೆ ಮಾಲೀಕರು ಮತ್ತು ಜನರಿಗೆ ವಿನಾಕಾರಣ ತೊಂದರೆಯಾಗುತ್ತಿದೆ. ಅಪಘಾತಗಳು ಕೂಡ ನಡೆಯುತ್ತಿವೆ. ಆದ್ದರಿಂದ ಸಾರಾಯಿ ಅಂಗಡಿಗಳಿಗೆ ಸಮಯ ನಿಶ್ಚಯಗೊಳಿಸಲು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು, ಜನರೊಂದಿಗೆ ಬೇರೆತು ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಮನೆ ಮನೆ ಪೊಲೀಸ ಯಾವೆಲ್ಲ ಕಾರ್ಯವನ್ನು ನಿರ್ವಹಿಸಲಿದೆ ಎಂಬುದನ್ನು ತಿಳಿಸಿ, ಬೆಳಗಾವಿಯಲ್ಲಿ ಮಾದಕವಸ್ತು ಮುಕ್ತ ನಗರವನ್ನಾಗಿಸಲು ಸಹಕರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಹಾಪುರ ಸಿಪಿಐ ಸೀಮಾನಿ, ಎಸಿಪಿ ಸದಾಶಿವ ಕಟ್ಟಿಮನಿ ಸೇರಿದಂತೆ ಇನ್ನುಳಿದ ಅಧಿಕಾರಿಗಳು ಮತ್ತು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.