ಬೆಳಗಾವಿ: ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಬದಾಮಿ, ನರಗುಂದ, ಸವದತ್ತಿ ಭಾಗದ ರೈತರ ಬೇಡಿಕೆಯಂತೆ ಇಂದಿನಿಂದ ಸವದತ್ತಿ ತಾಲೂಕಿನ ಮುನವಳ್ಳಿಯ ನವಿಲುತೀರ್ಥ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡಲು ತೀರ್ಮಾನಿಸಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ ನಗರದಲ್ಲಿರುವ ಮುಖ್ಯ ಇಂಜಿನಿಯರ್, ಉತ್ತರ ವಲಯದ ಕಚೇರಿಯಲ್ಲಿ ಇಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಧ್ಯಕ್ಷತೆಯಲ್ಲಿ ಮಲಪ್ರಭಾ ಯೋಜನೆಯ ನೀರಾವರಿ ಸಲಹಾ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ನರಗುಂದ ಶಾಸಕ ಸಿ.ಸಿ.ಪಾಟೀಲ, ಬದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದುಗೌಡ ಪಾಟೀಲ ಸೇರಿ ಮತ್ತಿತರರು ಪಾಲ್ಗೊಂಡಿದ್ದರು. ಈ ವೇಳೆ, ರೈತರ ಹಿತದೃಷ್ಟಿ ಗಮನದಲ್ಲಿ ಇಟ್ಟುಕೊಂಡು ಇವತ್ತಿನಿಂದಲೇ ನೀರನ್ನು ಕಾಲುವೆಗಳಿಗೆ ಹರಿಸಲು ತೀರ್ಮಾನಿಸಲಾಯಿತು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕಳೆದ ಹತ್ತು ದಿನಗಳಿಂದ ಮಳೆ ಕಡಿಮೆ ಆಗಿದೆ. ಬದಾಮಿ, ನರಗುಂದ, ಸವದತ್ತಿ ಭಾಗದ ರೈತರು ತಮ್ಮ ಬೆಳೆಗಳು ಒಣಗುತ್ತಿವೆ. ಹಾಗಾಗಿ, ಶೀಘ್ರವೇ ಮುನವಳ್ಳಿ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುವಂತೆ ಬೇಡಿಕೆ ಇಟ್ಟಿದ್ದರು. ಇಂದು ಶಾಸಕರು, ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದು, ಕಾಲುವೆಗಳಿಗೆ ನೀರು ಹರಿಸಲು ನಿರ್ಣಯ ಕೈಗೊಂಡಿದ್ದೇವೆ. ಮಲಪ್ರಭಾ ಯೋಜನೆಯ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷೆಯಾಗಿ ರೈತರ ಹಿತಾಸಕ್ತಿಯನ್ನು ಕಾಪಾಡುವುದು ಹಾಗೂ ಅವರ ಏಳೆಗೆಗೆ ಶ್ರಮಿಸುವುದು ನನ್ನ ಮುಖ್ಯ ಉದ್ದೇಶ. ರೈತರು ಖುಷಿ ಇದ್ದರೆ ನಾವೆಲ್ಲಾ ಜನಪ್ರತಿನಿಧಿಗಳು ಖುಷಿ ಇರುತ್ತೇವೆ ಎಂದರು.
ನವಿಲುತೀರ್ಥ ಜಲಾಶಯದಲ್ಲಿ ಸದ್ಯ 25 ಟಿಎಂಸಿ ನೀರು ಸಂಗ್ರಹವಿದೆ. ಇದರಲ್ಲಿ ಮುಂದಿನ ಜುಲೈವರೆಗೆ 20 ಟಿಎಂಸಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಮೀಸಲು ಇಟ್ಟುಕೊಂಡಿದ್ದೇವೆ. ಇನ್ನುಳಿದಂತೆ 4.5 ಟಿಎಂಸಿ ನೀರನ್ನು ಮುಂದಿನ 17 ದಿನಗಳ ಕಾಲ ಕೊನೆಯ ಹಂತದ ಕಾಲುವೆವರೆಗೂ ನೀರು ಹರಿಸಲಾಗುತ್ತದೆ. ತಾಯಿ ರೇಣುಕಾ ಯಲ್ಲಮ್ಮನ ಆಶೀರ್ವಾದದಿಂದ ಇನ್ನು ಹೆಚ್ಚು ಮಳೆಯಾಗಿ ರೈತರ ಬೆಳೆಗಳಿಗೆ ಅನುಕೂಲ ಆಗಲಿದೆ ಎಂಬ ಆಶಾಭಾವನೆ ನಮ್ಮೆಲ್ಲರಲ್ಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಮಾಜಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ರೈತರು ಈ ನೀರು ಸದ್ಬಳಕೆ ಮಾಡಿಕೊಳ್ಳಬೇಕು. ಎಚ್ಚರಿಕೆಯಿಂದ ಬಳಕೆ ಮಾಡಿಕೊಳ್ಳಬೇಕು. 15 ದಿನ ಮಾತ್ರ ನೀರಿನ ಲಭ್ಯತೆ ಇದೆ. ಇನ್ನು ತಾವು ಉಪಯೋಗಿಸಿದ ನಂತರ ಗೇಟ್ ಬಂದ್ ಮಾಡಿ ಕೆಳ ಭಾಗದ ರೈತರಿಗೆ ನೀರಿನ ಅನುಕೂಲ ಮಾಡುವ ಹೃದಯ ವೈಶಾಲ್ಯತೆ ಮೆರೆಯಬೇಕು ಎಂದು ಕಿವಿಮಾತು ಹೇಳಿದರು. ಈ ವೇಳೆ ಮುಖ್ಯ ಎಂಜಿನಿಯರ್ ಅಶೋಕ ವಾಸನದ, ಲಕ್ಷ್ಮಣ ನಾಯಿಕ, ಎಸ್.ಬಿ.ಮಲ್ಲಿಗವಾಡ ಸೇರಿ ಮತ್ತಿತರರು ಇದ್ದರು.