ಬೆಂಗಳೂರು: ‘ಸಂವಿಧಾನ ಪೀಠಿಕೆ ಓದು’ ಕಾರ್ಯಕ್ರಮದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋ ಹಾಕಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಉಪ ಕಾರ್ಯದರ್ಶಿ ಕೆ.ಜೆ. ಜಲಜಾಕ್ಷಿ ಅವರನ್ನು ಅಮಾನತುಗೊಳಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ವಿಧಾನಪರಿಷತ್ ಕಾರ್ಯದರ್ಶಿ ಆದೇಶ: ‘ಸಂವಿಧಾನದ ದಿನದ’ ಅಂಗವಾಗಿ ವಿಧಾನಪರಿಷತ್ತಿನ ಸಚಿವಾಲಯದಲ್ಲಿ 2024ರ ನವೆಂಬರ್ 26ರಂದು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋ ಹಾಕಿಲ್ಲವೆಂಬ ಆರೋಪದ ಮೇಲೆ ಕೆ.ಜೆ ಜಲಜಾಕ್ಷಿ ಅವರನ್ನು ಅಮಾನತು ಮಾಡಿ ವಿಧಾನಪರಿಷತ್ ಕಾರ್ಯದರ್ಶಿ ಜುಲೈ 4ರಂದು ಆದೇಶ ಹೊರಡಿಸಿದ್ದರು.
ಮುಂದಿನ ವಿಚಾರಣೆವರೆಗೆ ಆದೇಶಕ್ಕೆ ಹೈಕೋರ್ಟ್ ತಡೆ: ಈ ಅಮಾನತು ರದ್ದು ಕೋರಿ ಕೆ.ಜೆ. ಜಲಜಾಕ್ಷಿ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ಈ ಆದೇಶ ನೀಡಿದೆ. ಅಲ್ಲದೆ, ಅಮಾನತು ಆದೇಶಕ್ಕೆ ಅರ್ಜಿಯ ಮುಂದಿನ ವಿಚಾರಣೆ ವರೆಗೆ ಹೈಕೋರ್ಟ್ ತಡೆ ನೀಡಿ ಆದೇಶಿಸಿತು.
ಸಭಾಪತಿ, ಕಾರ್ಯದರ್ಶಿಗೆ ನೋಟಿಸ್: ಜೊತೆಗೆ, ವಿಧಾನಪರಿಷತ್ ಸಭಾಪತಿ ಹಾಗೂ ಕಾರ್ಯದರ್ಶಿಯವರಿಗೆ ನೋಟಿಸ್ ಜಾರಿಗೊಳಿಸಿತು. ಅಗತ್ಯ ಬಿದ್ದರೆ ತಡೆ ಆದೇಶವನ್ನು ಬದಲಿಸಲು ಅಥವಾ ಮಾರ್ಪಡಿಸಲು ಪ್ರತಿವಾದಿಗಳು ಕೋರಬಹುದು ಎಂದು ಹೇಳಿತು.