ಬೆಂಗಳೂರು : ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದ ಕೆ. ಸಿ. ವೇಣುಗೋಪಾಲ್ ಕೋರಿಕೆಯಂತೆ, ಗುಂಪು ಹತ್ಯೆಯಲ್ಲಿ ಹಲ್ಲೆಗೀಡಾದ ಅಶ್ರಫ್ ಕುಟುಂಬಸ್ಥರಿಗೆ 15 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ.
ಮಂಗಳೂರಿನ ಕುಡುಪುವಿನಲ್ಲಿ ನಡೆದ ಗುಂಪು ಹತ್ಯೆಗೆ ಸಂಬಂಧಿಸಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರ ಕೋರಿಕೆ ಹಾಗೂ ಸೂಚನೆಯ ಮೇರೆಗೆ ಸಭಾಧ್ಯಕ್ಷ ಯು. ಟಿ. ಖಾದರ್, ಸಚಿವ ಜಮೀರ್ ಅಹ್ಮದ್ ಖಾನ್, ಎಐಸಿಸಿ ಕಾರ್ಯದರ್ಶಿಗಳಾದ ಬಿ. ಕೆ. ಹರಿಪ್ರಸಾದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಹಾಗೂ ಮಂಜೇಶ್ವರ ಶಾಸಕರಾದ ಎ. ಕೆ. ಎಂ ಅಶ್ರಫ್ ಅವರು ಗುಂಪು ಹಲ್ಲೆಯಲ್ಲಿ ಹತ್ಯೆಗೀಡಾದ ಅಶ್ರಫ್ ಅವರ ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿದರು.
ಸ್ಪೀಕರ್ ಯು. ಟಿ. ಖಾದರ್ ಸರ್ಕಾರಿ ನಿವಾಸದಲ್ಲಿ ಕುಟುಂಬಸ್ಥರ ಜೊತೆ ಚರ್ಚೆ ನಡೆಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಲು ಸರ್ಕಾರದ ವತಿಯಿಂದ ವಿಶೇಷ ಅಭಿಯೋಜಕರನ್ನು ನೇಮಿಸಲು ತೀರ್ಮಾನಿಸಲಾಯಿತು. ಅದೇ ರೀತಿ ಗುಂಪು ಹತ್ಯೆ ಕಾಯ್ದೆ ಪ್ರಕಾರ ಹತ್ಯೆಯಾದ ಅಶ್ರಫ್ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ಒದಗಿಸುವ ಕುರಿತಾಗಿ ಕೂಡಾ ಸಮಾಲೋಚನೆ ನಡೆಸಲಾಯಿತು.