ಬೆಂಗಳೂರು: ಕಿರುತೆರೆ ರಿಯಾಲಿಟಿ ಶೋ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಮಾರಕಾಸ್ತ್ರ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಶಾರ್ಟ್ ವಿಡಿಯೋ ಮಾಡಿದ್ದ ಪ್ರಕರಣ ಚಾರ್ಜ್ ಶೀಟ್ ಹಂತ ತಲುಪಿದೆ. ವಿಡಿಯೋಗೆ ಬಳಸಿದ್ದ ಮಾರಕಾಸ್ತ್ರಗಳು ಮೂರು ತಿಂಗಳು ಕಳೆದರೂ ಪೊಲೀಸರಿಗೆ ಸಿಗದಿರುವುದು ಇಬ್ಬರೂ ಆರೋಪಿಗಳಿಗೂ ಪುನಃ ಸಂಕಷ್ಟ ತಂದೊಡ್ಡುವ ಸಾಧ್ಯತೆ ದಟ್ಟವಾಗಿದೆ. ಮಾರಕಾಸ್ತ್ರ ದೊರೆಯದಿದ್ದರೆ ಸಾಕ್ಷ್ಯನಾಶವೆಂದು ಉಲ್ಲೇಖಿಸಿ ಚಾರ್ಜ್ ಶೀಟ್ ಸಲ್ಲಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಮಾರಕಾಸ್ತ್ರಗಳ ಮಾದರಿಯನ್ನು ತಯಾರಿಸಿ ಕೊಟ್ಟಿದ್ದರು ಎಂದು ಹೇಳಲಾದ ಆರ್ಟ್ ಡೈರೆಕ್ಟರ್‌ಗಳ ಹೇಳಿಕೆ ಪಡೆದಿರುವ ಬಸವೇಶ್ವರ ನಗರ ಠಾಣೆ ಪೊಲೀಸರು, ಘಟನಾ ಸ್ಥಳದ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಆದರೆ, ಕೃತ್ಯಕ್ಕೆ ಬಳಸಲಾಗಿರುವ ಮಾರಕಾಸ್ತ್ರಗಳನ್ನು ಸುಮನಹಳ್ಳಿ ಬಳಿ ಮೋರಿಯಲ್ಲಿ ಎಸೆದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದರಾದರೂ, ಅವು ಇನ್ನೂ ಲಭ್ಯವಾಗಿಲ್ಲ. ಚಾರ್ಜ್ ಶೀಟ್‌ನಲ್ಲಿ ಸಾಕ್ಷ್ಯನಾಶವೆಂದು ಉಲ್ಲೇಖಿಸಿದರೆ ಮತ್ತು ಆರೋಪ ಸಾಬೀತಾದರೆ ಮತ್ತೊಮ್ಮೆ ಆರೋಪಿಗಳಿಗೆ ಸಂಕಷ್ಟ ಎದುರಾಗಲಿದೆ.
ಮತ್ತೊಂದೆಡೆ, ವಿಡಿಯೋ ಚಿತ್ರೀಕರಣವಾದ ಸ್ಥಳದ ವ್ಯಾಪ್ತಿಯ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಿದ್ದು, ನಂತರ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಮಾರಕಾಸ್ತ್ರ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ವಿಡಿಯೋ ಮಾಡಿದ್ದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಬ್ಬರ ವಿರುದ್ಧ ಕಳೆದ ಮಾರ್ಚ್‌ನಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಬಸವೇಶ್ವರ ನಗರ ಠಾಣೆ ಪೊಲೀಸರು, ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರು. ಬಳಿಕ ಇಬ್ಬರಿಗೂ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ಸಾಕ್ಷ್ಯನಾಶಕ್ಕೆ ಯತ್ನಿಸಬಾರದು ಮತ್ತು ಇದೇ ರೀತಿಯಾಗಿ ಮತ್ತೆ ಘಟನೆ ಮರುಕಳಿಸಬಾರದೆಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿತ್ತು.