ಬೆಳಗಾವಿ: ತಾಯಿ ಟೈಲರಿಂಗ್ ಕೆಲಸ ಮಾಡುತ್ತಾರೆ. ತಂದೆ ಇಲ್ಲ. ತಾಯಿಗೆ-ಮಗ, ಮಗನಿಗೆ-ತಾಯಿನೇ ಎಲ್ಲಾ. ಮನೆಯಲ್ಲಿ ಬಡತನ ಹಾಸು ಹೊಕ್ಕಾಗಿತ್ತು. ಆದರೆ, ತಾಯಿಗೆ ಮಗನ ಸಾಧನೆ ಬಗ್ಗೆ ಬೆಟ್ಟದಷ್ಟು ಕನಸು. ಮಗ ಎಂಜಿನಿಯರಿಂಗ್ ಮೆಕ್ಯಾನಿಕಲ್ ವಿಭಾಗದಲ್ಲಿ 7 ಚಿನ್ನದ ಪದಕ ಗೆದ್ದು ತಾಯಿ ಹೆಮ್ಮೆ ಪಡುವಂತ ಸಾಧನೆಗೈದಿದ್ದಾರೆ.
ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 25ನೇ ಘಟಿಕೋತ್ಸವ ನಡೆಯಿತು. ಈ ವೇಳೆ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ವಿಭಾಗದ ಕಾರ್ತಿಕ್ ಎಲ್. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಕೈಯಿಂದ 7 ಚಿನ್ನದ ಪದಕ ಸ್ವೀಕರಿಸಿದರು. ಮಗನ ಸಾಧನೆ ಕಂಡು ತಾಯಿ ಹಿರಿಹಿರಿ ಹಿಗ್ಗಿದರು. ಮಗನ ಓದಿಸಲು ಪಟ್ಟ ಕಷ್ಟ ಎಲ್ಲಾ ಒಂದು ಕ್ಷಣ ಕಣ್ಣೆದುರು ಬಂದು ಹೋಯಿತು. ತಾಯಿ ಕೈಗೆ ಚಿನ್ನದ ಪದಕ ಕೊಟ್ಟು ಕಾಲಿಗೆ ನಮಸ್ಕರಿಸಿ ಕಾರ್ತಿಕ ಆಶೀರ್ವಾದ ಪಡೆದರು.ಕಾರ್ತಿಕ್ ಎಲ್. ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕೆರೆ ಹೋಬಳಿಯ ದೇವಮಾಚೋಹಳ್ಳಿ ನಿವಾಸಿ. ಕಾರ್ತಿಕ್ ತಂದೆ ತೀರಿಕೊಂಡಿದ್ದಾರೆ. ತಾಯಿ ಭಾಗ್ಯ ಅವರು ಗಾರ್ಮೆಂಟ್ನಲ್ಲಿ ಟೈಲರಿಂಗ್ ಕೆಲಸ ಮಾಡುತ್ತಾ, ಕಷ್ಟಪಟ್ಟು ಮಗನ ಓದಿಸಿದ್ದಾರೆ. ತಾಯಿ ಪಡುತ್ತಿದ್ದ ಕಷ್ಟ ಕಣ್ಣಾರೆ ಕಂಡಿದ್ದ ಮಗ, ಇಡೀ ರಾಜ್ಯವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾನೆ.
ಪಿಯುಸಿ ಶೇ.94, ಎಸ್ಎಸ್ಎಲ್ಸಿ ಶೇ.86ರಷ್ಟು ಅಂಕ ಗಳಿಸಿದ್ದೆ. ಬಿಇಯಲ್ಲಿ 7 ಚಿನ್ನದ ಪದಕ ನಿರೀಕ್ಷೆ ಮಾಡಿರಲಿಲ್ಲ. ಆದರೂ ಬಂದಿದ್ದು ತುಂಬಾ ಖುಷಿಯಾಗುತ್ತಿದೆ. ತಂದೆ-ತಾಯಿ ಕಷ್ಟ ಹೋಗಲಾಡಿಸಲು ಮಕ್ಕಳಿಗೆ ಬೇರೆ ಯಾವುದೇ ದಾರಿ ಇಲ್ಲ. ನಿಮ್ಮ ಮುಂದೆ ಓದುವುದು ಒಂದೇ ದಾರಿ. ಹಾಗಾಗಿ, ಒಳ್ಳೆಯ ರೀತಿ ಓದಿ ಉದ್ಯೋಗ ಪಡೆದುಕೊಂಡು ಪಾಲಕರನ್ನು ಚನ್ನಾಗಿ ನೋಡಿಕೊಳ್ಳಿ ಎಂಬುದು ಕಾರ್ತಿಕ್ ಮಾತು.
ಕಾರ್ತಿಕ್ ತಾಯಿ ಭಾಗ್ಯ ಅವರು ಮಾತನಾಡಿ, ನಾನು ಓದಿಲ್ಲ. ಮಗನ ಓದಿಸಬೇಕು ಅಂತಾ ಆಸೆ ಇತ್ತು. ಹಾಗಾಗಿ, ತುಂಬಾ ಕಷ್ಟ ಪಟ್ಟು ಓದಿಸಿದೆ. ನಾನು ಕಷ್ಟಪಟ್ಟಿದ್ದಕ್ಕೆ ಮಗ ಒಳ್ಳೆಯ ಫಲ ತಂದು ಕೊಟ್ಟಿದ್ದಾನೆ. ಬಹಳ ಸಂತಸವಾಗುತ್ತಿದೆ. ಮಗನ ಸಾಧನೆ ತುಂಬಾ ಹೆಮ್ಮೆ ಪಡುತ್ತೇನೆ ಎಂದರು.