ಮೈಸೂರು, (ಮೇ 25): ಮಗಳು ಮನೆ ಬಿಟ್ಟು ಓಡಿ ಹೋಗಿದ್ದಕ್ಕೆ ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರಿನ (Mysuru) ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹದೇವಸ್ವಾಮಿ, ಪತ್ನಿ ಮಂಜುಳಾ, ಮಗಳು ಹರ್ಷಿತಾ ಮೃತ ದುರ್ದೈವಿಗಳು. ಇವರ ಸಾವಿಗೆ ಕಾರಣ ದೊಡ್ಡ ಮಗಳು ಕಾರಣ ಎಂದು ತಿಳಿದುಬಂದಿದೆ, ಮಹದೇವ ಸ್ವಾಮಿ ಅವರ ದೊಡ್ಡ ಮಗಳು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಆತನನ್ನು ಮದುವೆಯಾಗುವುದಾಗಿ ಆಕೆ ಪಟ್ಟು ಹಿಡಿದಿದ್ದಾಳಂತೆ. ಆದ್ರೆ ಮನೆಯವರಿಗೆ ಈ ಮದುವೆ ಇಷ್ಟವಿರಲಿಲ್ಲವಂತೆ. ಹೀಗಾಗಿ ಅವಳು ಮನೆಬಿಟ್ಟು ಪ್ರೀತಿಸಿದ ಹುಡುಗನ ಜೊತೆ ಓಡಿಹೋಗಿದ್ದಾಳೆ. ಇದರಿಂದ ಮನನೊಂದು ಮೂವರು ಹಗ್ಗಕಟ್ಟಿಕೊಂಡು ಬೂದನೂರು ಕೆರೆಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಈ ಘಟನೆಗೆ ಇಡೀ ಗ್ರಾಮವೇ ಮಮ್ಮಲ ಮರುಗಿದೆ. ಆದ್ರೆ, ಓಡಿ ಹೋದವಳು ಮಾತ್ರ ತನ್ನ ಅಪ್ಪ, ಅಮ್ಮ, ತಂಗಿಯ ಮಾರಿ ನೋಡಲು ಸಹ ಬಂದಿಲ್ಲ.
ಮುಖ ನೋಡಲು ಬರಲೇ ಇಲ್ಲ
ಮಹದೇವಸ್ವಾಮಿ ಹಿರಿಯ ಪುತ್ರಿ ಅರ್ಪಿತಾ ಯುವನಕೊಂದಿಗೆ ಪ್ರೀತಿಯಲ್ಲಿ ಬಿದ್ದು ಮನೆಬಿಟ್ಟು ಹೋಗಿದ್ದಳು. ಹೀಗಾಗಿ ಮಾನಕ್ಕೆ ಅಂಜಿ ಮೂವರು ಜೀವ ಕಳೆದುಕೊಂಡಿದ್ದಾರೆ. ಹೆಚ್.ಡಿ ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ಮಳೆಯ ನಡುವೆಯೇ ಮೂವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮೃತರನ್ನು ನೆನೆದು ಇಡೀ ಗ್ರಾಮಸ್ಥರು ಕಣ್ಣೀರಿಡುತ್ತಿದ್ದಾರೆ. ಅತ್ತ, ಮನೆ ಬಿಟ್ಟು ಹೋಗಿದ್ದ ಮಗಳು ಅಂತ್ಯಕ್ರಿಯೆಗೂ ಬಂದಿಲ್ಲ ಹೀಗಾಗಿ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ.