ಹಕ್ಕುಪತ್ರ ವಿತರಣೆ ಮಾಡುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ
ಬೆಳಗಾವಿ: ಮೇ 30 ರ ಒಳಗಾಗಿ ಬೈಲಹೊಂಗಲ ಪಟ್ಟಣದ ಹರಳಯ್ಯಾ ಕಾಲನಿ (ಮಚಗಾರ ಗಲ್ಲಿ) ನಿವಾಸಿಗಳ ಹಕ್ಕು ಪತ್ರಗಳನ್ನು ವಿತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಅಂಬೇಡ್ಕರ್ ಯುವ ಸೇನೆ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.
ಇಂದು ಬೆಳಗಾವಿಯ ಹನುಮಾನ ನಗರದಲ್ಲಿ ಇರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮುಂದೆ ಧರಣಿ ನಡೆಸಲಾಯಿತು. ಸುಮಾರು 50 ವರ್ಷಗಳಿಂದ ದಲಿತ ಸಮಾಜದವರು ಹಾಗೂ ಅಲ್ಪ ಸಂಖ್ಯಾತರು ಹಾಗೂ ಇನ್ನೂ ಅನೇಕ ಸಮಾಜದವರು ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಅನೇಕ ವರ್ಷಗಳಿಂದ ನಮ್ಮ ಮನೆಗಳ ಹಕ್ಕು ಪತ್ರಗಳನ್ನು ವಿತರಿಸದೆ ನಮಗೆ ಅನ್ಯಾಯ ಮಾಡಿದ್ದಾರೆ. ಸಂಬಂಧಪಟ್ಟ ತಮ್ಮ ಇಲಾಖೆ,
ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಹಾಗೂ ಮಂಡಳಿಯ ಅಧ್ಯಕ್ಷರಿಗೆ ನಮ್ಮ ಮನೆಗಳ ಹಕ್ಕು ಪತ್ರಗಳನ್ನು ವಿತರಿಸಬೇಕೆಂದು ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನ ಆಗಿಲ್ಲ. ಹಾಗಾಗಿ ಹಕ್ಕು ಪತ್ರ ವಿತರಿಸದೇ ಹೋದರೆ ನಾವು ಅನಿವಾರ್ಯವಾಗಿ ತಮ್ಮ ಕಚೇರಿಯ ಮುಂದೆ ನಿರಂತರ ಅಹೋರಾತ್ರಿ ಧರಣಿ ಸತ್ಯಾಗ್ರಹ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.