ಧಾರವಾಡ- ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಖಾತ್ರಿ ಪಡಿಸಬೇಕು ಹಾಗೂ ರಾಜ್ಯದಲ್ಲಿನ 4,200 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಸಂಯೋಜನೆಯ ಹೆಸರಿನಲ್ಲಿ ಮುಚ್ಚುವು ನಿರ್ಧಾರದಿಂದ ಹಿಂದೆ ಸರಿಯಲು ಆಗ್ರಹಿಸಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಎಐಡಿಎಸ್‌ಓ ಸಂಘನೆ ಮನವಿ ಮಾಡಿತ್ತು.
ಎಐಡಿಎಸ್‌ಓ ಸಂಘಟನೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಸಂಘಟನೆ ಪದಾಧಿಕಾರಿಗಳು ಮನವಿ ನೀಡಿದರು. ಬಳಿಕ ಮಾತನಾಡಿದ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಕಳೆದ ಮೂರು ವರ್ಷಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾರ್ಥಿ ವೇತನ ಲಭ್ಯವಾಗುತ್ತಿಲ್ಲ. ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆ ಅಡಿಯಲ್ಲಿ ಬರುವ ಪದವಿ, ಸ್ನಾತಕೋತ್ತರ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗುತ್ತಿಲ್ಲ. ರಾಜ್ಯದ ಹಲವೆಡೆ ಕೆಲವು ಎಸ್ ಸಿ/ಎಸ್ ಟಿ ವಿದ್ಯಾರ್ಥಿಗಳು ಕೂಡ ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ. ಇದರಿಂದ ಬಡ ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈಕೂಡಲೇ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು ಒತ್ತಾಯಿಸಿದರು.
ಇತ್ತೀಚೆಗಷ್ಟೆ ರಾಜ್ಯ ಸರ್ಕಾರವು ‘ ಹಬ್ ಅಂಡ್ ಸ್ಪೋಕ್’ ಅಡಿಯಲ್ಲಿ ಕಡಿಮೆ ಹಾಜರಾತಿ ಇರುವ ಸರ್ಕಾರಿ ಶಾಲೆಗಳನ್ನು ಇತರ ಶಾಲೆಗಳೊಂದಿಗೆ ಸಂಯೋಜಿಸುವ ನಿರ್ಧಾರವನ್ನು ಪ್ರಕಟಿಸಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸುಧಾರಣಾ ಸಮಿತಿಯನ್ನು ಸಹ ರಚಿಸಲಾಗಿದೆ. ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ರಾಜ್ಯದಲ್ಲಿ 4 ಸಾವಿರಕ್ಕೂ ಅಧಿಕ ಶಾಲೆಗಳು 10 ಮಕ್ಕಳಿಗಿಂತ ಕಡಿಮೆ ದಾಖಲಾತಿಯನ್ನು ಹೊಂದಿವೆ.
ಈ ಶಾಲೆಗಳ ಭವಿಷ್ಯದ ಕುರಿತು ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ತಲೆದೊರಿದೆ. ಸರ್ಕಾರವು ರಾಜ್ಯದ ಬಡಜನರ ಮಕ್ಕಳ ಶಿಕ್ಷಣದ ಆಶಾಕಿರಣವಾಗಿರುವ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕೆಂಬುದು ರಾಜ್ಯದ ವಿದ್ಯಾರ್ಥಿಗಳ ಆಶಯವಾಗಿದೆ. ಈ ಕೂಡಲೇ ಸರ್ಕಾರಿಬಶಾಲೆ ಮುಚ್ಚುವ ನಿರ್ಧಾರದಿಂದ ಸರ್ಕಾರ ಹಿಂದಕ್ಕೆ ಸರಿಯಬೇಕು ಎಂದು ಆಗ್ರಹಿಸಿದರು.