ಹುಬ್ಬಳ್ಳಿ: ಕೇಂದ್ರ ಬಜೆಟ್ ಸಮೀಪಿಸುತ್ತಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ-ಧಾರವಾಡ ಮಂದಿ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕಳೆದ ಬಜೆಟ್ನಲ್ಲಿ ಸಾಕಷ್ಟು ನಿರೀಕ್ಷೆ ಹೊಂದಿತ್ತು. ಆದರೆ ಈಡೇರಿದ್ದು ಬೆರಳಣಿಕೆಯಷ್ಟು ಮಾತ್ರ. ಹೀಗಿದ್ದರೂ ಭರವಸೆ ಬಿಡದ ಸಂಸ್ಥೆ ಈ ಬಾರಿಯೂ ಹಲವು ನಿರೀಕ್ಷೆಗಳನ್ನು ಹೊಂದಿದೆ.ಈ ಕುರಿತಂತೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕಾರ್ಯದರ್ಶಿ ರವೀಂದ್ರ ಎಸ್.ಬಳಿಗೇರ ಅವರು ‘ಈಟಿವಿ ಭಾರತ’ಕ್ಕೆ ಪ್ರತಿಕ್ರಿಯಿಸಿದರು.”ಕಳೆದ ಬಜೆಟ್ನಲ್ಲಿ ಧಾರವಾಡ-ಬೆಳಗಾವಿ ನೇರ ರೈಲು ಸಂಪರ್ಕಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ ಎರಡು ವರ್ಷಗಳಾದರೂ ಕೂಡ ಇನ್ನೂ ಆಮೆಗತಿಯಲ್ಲಿ ನಡೆಯುತ್ತಿದೆ. ಇದು ಶೀಘ್ರವಾಗಿ ಕಾರ್ಯರೂಪಕ್ಕೆ ಬರುವುದರ ಜೊತೆಗೆ ಪ್ರಸಕ್ತ ಬಜೆಟ್ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು ಎಂಬ ಬೇಡಿಕೆ ಇದೆ. ಹಾಗೆಯೇ, ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿ ಕೂಡ ನಿಧಾನಗತಿಯಲ್ಲಿ ನಡೆಯುತ್ತಿದೆ. ಆರೇಳು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ಕಾಮಗಾರಿ ಅಡೆತಡೆ ಉಂಟು ಮಾಡಿದೆ. ಅಭಿವೃದ್ಧಿಗೆ ಪೂರಕವಾಗಿ ಕಾಮಗಾರಿ ವೇಗ ಹೆಚ್ಚಿಸಲು ಕೇಂದ್ರದ ಅನುದಾನದ ಅವಶ್ಯಕತೆ ಇದೆ. ಇತ್ತೀಚೆಗೆ ಹುಬ್ಬಳ್ಳಿಯ ಧಾರವಾಡ ಮಹಾನಗರ ಪಾಲಿಕೆ ಇಬ್ಭಾಗವಾಗಿ ಧಾರವಾಡ ಪ್ರತ್ಯೇಕ ಪಾಲಿಕೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಆದರೆ ಎರಡು ಮಹಾನಗರ ಪಾಲಿಕೆಗಳಿಗೆ ಕೇಂದ್ರ ಸರ್ಕಾರದ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಬೇಕು. ಇದರಿಂದ ಎರಡು ನಗರಗಳ ಅಭಿವೃದ್ಧಿ ಅನುಕೂಲವಾಗಲಿದೆ. ರಸ್ತೆ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಅನುದಾನಕ್ಕೆ ಬಜೆಟ್ನಲ್ಲಿ ಸಿಗುವ ನಿರೀಕ್ಷೆ ಹೊಂದಲಾಗಿದೆ” ಎಂದರು.
Laxmi News 24×7