ಬೆಂಗಳೂರು: ರಾಜಧಾನಿಯ ಬಿಬಿಎಂಪಿಯ ಬಹುತೇಕ ಆರ್‌ಓ ಮತ್ತು ಎಆರ್‌ಓ ಕಚೇರಿಗಳಲ್ಲಿ ಕಾರ್ಯನಿರ್ವಹಣೆಯಲ್ಲಿ ಲೋಪಗಳು ಕಂಡುಬಂದ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿಯ 54 ಕಚೇರಿಗಳ ಮೇಲೆ ಶುಕ್ರವಾರ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಖುದ್ದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹಾಗೂ ಇಬ್ಬರು ಉಪ ಲೋಕಾಯುಕ್ತರು ದಾಳಿಯಲ್ಲಿ ಭಾಗಿಯಾಗಿ, ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು. ಶುಕ್ರವಾರ ಮಧ್ಯಾಹ್ನದಿಂದ ನಡೆಯುತ್ತಿದ್ದ ತಪಾಸಣೆಯು ಹಲವು ಕಚೇರಿಗಳಲ್ಲಿ ತಡರಾತ್ರಿವರೆಗೂ ಜರುಗಿತು. ಪರಿಶೀಲನೆ ವೇಳೆ ಬಿಬಿಎಂಪಿ ಕಚೇರಿಗಳಲ್ಲಿ ಹಲವು ಲೋಪಗಳು ಕಂಡು ಬಂದಿದೆ.
ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಹೆಬ್ಬಾಳ ಸಬ್ ಡಿವಿಷನ್ ಮುನಿರೆಡ್ಡಿ ಪಾಳ್ಯ ಮುಖ್ಯ ರಸ್ತೆೆಯಲ್ಲಿರುವ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಎಆರ್‌ಓ ಕಚೇರಿಗೆ ಖುದ್ದು ಭೇಟಿ ನೀಡಿದ್ದರು. ಕಚೇರಿಯಲ್ಲಿ ಯಾವುದೇ ವಹಿಗಳನ್ನು ಅಂದರೆ ಹಾಜರಾತಿ ವಹಿ, ನಗದು ಘೋಷಣಾ ವಹಿ, ಚಲನಾ-ವಲನಾ ವಹಿಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಪತ್ತೆೆಯಾಗಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರರ ಹೆಬ್ಬಾಳ ಸಬ್ ಡಿವಿಷನ್ ಕಚೇರಿಯಲ್ಲಿ ಒಟ್ಟು 22 ಸಿಬ್ಬಂದಿಯಿದ್ದು, ಅದರಲ್ಲಿ 21 ಮಂದಿ ಮಾತ್ರ ಹಾಜರಾತಿ ವಹಿಗೆ ಸಹಿ ಮಾಡಿದ್ದು, ಕಚೇರಿಯಲ್ಲಿ ಕೇವಲ ಮೂರು ಜನ ಮಾತ್ರ ಇದ್ದರು. ಎಆರ್‌ಓ ಸಹ ಕಚೇರಿಯಲ್ಲಿ ಹಾಜರಿರಲಿಲ್ಲ. ಕರೆ ಮಾಡಿ ಕೇಳಿದಾಗ ಬೆಳಗ್ಗೆೆ ಕಚೇರಿಗೆ ಬಂದು ನಂತರ ಮುಖ್ಯ ಕಚೇರಿಗೆ ಹೋಗಿರುವುದಾಗಿ ತಿಳಿಸಿದ್ದಾರೆ. ಆದರೆ ಆ ಬಗ್ಗೆೆ ಚಲನ – ವಲನ ವಹಿಯಲ್ಲಿ ನಮೂದು ಮಾಡಿಲ್ಲ. ಎಆರ್‌ಓ ಅವರು ಬೆಳಗ್ಗೆೆ ಕಚೇರಿಗೆ ಬಂದು ಮಧ್ಯಾಹ್ನ ತನಕ ಕೆಲಸ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಹಾಜರಾತಿ ವಹಿಯಲ್ಲಿ ಅವರು ಸಹಿ ಮಾಡಿಲ್ಲ. ಇದೇ ಕಚೇರಿಯಲ್ಲಿ ನಗದು ವಹಿ ಮತ್ತು ಚಲನಾ-ವಲನಾ ವಹಿಗಳನ್ನು ಆಗಸ್ಟ್- 2023ರ ನಂತರ ನಿರ್ವಹಣೆ ಮಾಡಿಲ್ಲ. ಈ ಬಗ್ಗೆೆ ಹಾಜರಿದ್ದ ಸಿಬ್ಬಂದಿಯು ಯಾವುದೇ ಸಮರ್ಪಕ ಉತ್ತರ ನೀಡದಿರುವುದು ತಪಾಸಣೆಯಲ್ಲಿ ಕಂಡುಬಂದಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.