ಹರಿಹರ: ದೀಪಾವಳಿ ಅಮಾವಾಸ್ಯೆ ಪೂಜೆಯ ಅಂಗವಾಗಿ ವಾಹನ ತೊಳೆಯಲು ತೆರಳಿದ್ದ ಇಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಗರದ ಹೊರವಲಯ ಗುತ್ತೂರು ಬಳಿ ಗುರುವಾರ ನಡೆದಿದೆ.
ರೈತ ಅಣ್ಣಪ್ಪ ಪಿ. ಗಿಡ್ಡಬಸಪ್ಪರ್ (46) ಮತ್ತು ಇವರ ಅಣ್ಣನ ಮಗ ಪ್ರಶಾಂತ್ ಪಿ. ಗಿಡ್ಡಬಸಪ್ಪರ್ (15) ಮೃತಪಟ್ಟವರು.
ಪ್ರಶಾಂತ್ ಸೇಂಟ್ ಮೇರಿಸ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ.
ಅಣ್ಣಪ್ಪ ಅವರು ವಾಹನವನ್ನು ತೊಳೆಯಲು ಗ್ರಾಮಕ್ಕೆ ಸಮೀಪದ ನದಿಗೆ ಬೆಳಿಗ್ಗೆ ತೆರಳಿದ್ದರು. ತಮ್ಮ ಅಣ್ಣನ (ಪ್ರಕಾಶ್ ಗಿಡ್ಡಬಸಪ್ಪರ್) ಮಗ ಪ್ರಶಾಂತ್‌ಗೆ ಶಾಲೆಗೆ ರಜೆ ಇದ್ದ ಕಾರಣ ಜೊತೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಬಕೆಟ್ ನೀರಲ್ಲಿ ತೇಲಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ಪ್ರಶಾಂತ್ ಅದನ್ನು ಹಿಡಿಯಲು ನೀರಿನಲ್ಲಿ ಸ್ವಲ್ಪ ಮುಂದಕ್ಕೆ ಹೋಗಿದ್ದಾನೆ. ಆಗ ಅಲ್ಲಿನ ಗುಂಡಿಯಲ್ಲಿ ಮುಳುಗಲು ಆರಂಭಿಸಿದ್ದಾನೆ. ಪ್ರಶಾಂತ್‌ನನ್ನು ರಕ್ಷಿಸಲು ಧಾವಿಸಿದ ಅಣ್ಣಪ್ಪ ಅವರೂ ಗುಂಡಿಯ ಸೆಳೆವಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಕೆಲ ಗ್ರಾಮಸ್ಥರು ರಕ್ಷಣೆಗೆ ಧಾವಿಸಿದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ನಂತರ ಮುಳುಗು ತಜ್ಞರು ಬಂದು ಇಬ್ಬರ ಮೃತದೇಹಗಳನ್ನು ಮಧ್ಯಾಹ್ನದ ವೇಳೆಗೆ ಹೊರಕ್ಕೆ ತೆಗೆದರು ಎನ್ನಲಾಗಿದೆ.
ಮರಳಿಗಾಗಿ ನದಿಯಲ್ಲಿ ಆಳವಾದ ಗುಂಡಿಗಳನ್ನು ತೋಡಿದ್ದು, ಜನ ಹಾಗೂ ದನಕರು ಮುಳುಗಿ ಸಾವನ್ನಪ್ಪುವ ಘಟನೆಗಳು ಆಗಾಗ ನಡೆಯುತ್ತಲೇ ಇವೆ. ಗುಂಡಿಗಳನ್ನು ಮುಚ್ಚಿಸಲು ತಹಶೀಲ್ದಾರ್ ಅವರು ಕ್ರಮ ಕೈಗೊಳ್ಳಬೇಕು ಎಂದು ಮೃತರ ಸಂಬಂಧಿಕರು ನದಿ ದಡದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದರು.