ಬೆಳಗಾವಿ: ಬೆಳಗಾವಿ ಮತ್ತು ಬೆಂಗಳೂರು ಮಧ್ಯೆ ದಿನನಿತ್ಯ ಸಂಚರಿಸುವ ಇಂಡಿಗೋ ವಿಮಾನವನ್ನು ದಿನಾಂಕ 27 ರಿಂದ ಸ್ಥಗಿತಗೊಳಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಅವರು ಬುಧವಾರ ನವದೆಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವರಾದ ಕೆ. ಆರ್ ನಾಯ್ಡು ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಬೆಳಗಾವಿ ಬೆಂಗಳೂರು ಬೆಳಗಾವಿ ಮಧ್ಯೆ ದಿನನಿತ್ಯ ಬೆಳಿಗ್ಗೆ ಸಂಚರಿಸುವ ಇಂಡಿಗೋ ಸಂಸ್ಥೆ ವಿಮಾನಯಾನ ಸೇವೆಯನ್ನು ರದ್ದು ಮಾಡಬಾರದು. ಇದರಿಂದ ಪ್ರಯಾಣಿಕರಿಗೆ ಬಹಳ ತೊಂದರೆಯಾಗಲಿದೆ ಎಂದರು.
ಬೆಳಗಾವಿ – ಬೆಂಗಳೂರು ನಡುವೆ ಇಂಡಿಗೋ ಸಂಸ್ಥೆ ಪ್ರತಿನಿತ್ಯ ಬೆಳಿಗ್ಗೆ ವಿಮಾನಯಾನ ಸೇವೆಯನ್ನು ಒದಗಿಸುತ್ತಾ ಬಂದಿದೆ. ಕಳೆದ ಒಂದು ವರ್ಷದಲ್ಲಿ ಪ್ರತಿಶತ 82 ರಷ್ಟು ಅಂದರೆ ಪೂರ್ಣ ಸಾಮರ್ಥ್ಯ ಪ್ರಯಾಣಿಕರು ಇದರಲ್ಲಿ ಸಂಚಾರ ಮಾಡಿದ್ದಾರೆ ಎಂದು ಸಚಿವರಿಗೆ ಮನವರಿಕೆ ಮಾಡಿದರು.
ಆದರೆ ಈಗ ಇಂಡಿಗೋ ಏರ್ ಲೈನ್ಸ್ ಬರುವ ದಿನಾಂಕ 27 ರಿಂದ ಈ ಸೇವೆಯನ್ನು ರದ್ದುಗೊಳಿಸಲಿದೆ. ಇದು ಅತ್ಯಂತ ಬೇಸರದ ಸಂಗತಿ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ರದ್ದು ಮಾಡದಂತೆ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸುವಂತೆ ಜಗದೀಶ್ ಶೆಟ್ಟರ್ ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದರು.